ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ | ವಿಂಡೀಸನ್ನು ಭರ್ಜರಿ 10 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕ

Update: 2024-10-04 16:37 GMT

PC : X 

ದುಬೈ : ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ದಕ್ಷಿಣ ಆಫ್ರಿಕ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಭರ್ಜರಿ 10 ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ತನ್ನ ಅಭಿಯಾನವನ್ನು ಅಗಾಧ ಆತ್ಮವಿಶ್ವಾಸದೊಂದಿಗೆ ಆರಂಭಿಸಿದೆ.

ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್ ಮಹಿಳೆಯರು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಕೇವಲ 118 ರನ್‌ಗಳನ್ನು ಗಳಿಸಿದರು.

41 ಎಸೆತಗಳಲ್ಲಿ 44 ರನ್ ಗಳಿಸಿದ ಸ್ಟಫನೀ ಟೇಲರ್ ಅಜೇಯರಾಗಿ ಉಳಿದರು. ಮಧ್ಯಮ ಕ್ರಮಾಂಕದಲ್ಲಿ ಅವರು ತಂಡಕ್ಕೆ ಆಧಾರ ಒದಗಿಸಿರದಿದ್ದರೆ ತಂಡದ ಮೊತ್ತವು ತುಂಬಾ ಕಡಿಮೆಯಾಗಿರುತ್ತಿತ್ತು.

ದಕ್ಷಿಣ ಆಫ್ರಿಕದ ಪರವಾಗಿ ಎಡಗೈ ಸ್ಪಿನ್ನರ್ ನೊಂಕುಲುಲೆಕೊ ಮ್ಲಾಬ ತನ್ನ ಜೀವನಶ್ರೇಷ್ಠ ಪ್ರದಶರ್ನ ನೀಡಿದರು. ಅವರು 29 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರು. ಅದೇ ವೇಳೆ, ಮರಿಝಾನ್ ಕಾಪ್ 14 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು.

ಗೆಲ್ಲಲು 20 ಓವರ್‌ಗಳಲ್ಲಿ 119 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕ ಮಹಿಳೆಯರು, ಇನ್ನೂ 13 ಎಸೆತಗಳು ಬಾಕಿಯಿರುವಂತೆಯೇ ಗೆಲುವಿನ ತೀರ ತಲುಪಿದರು. ದಕ್ಷಿಣ ಆಫ್ರಿಕವು 17.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 119 ರನ್ ಗಳಿಸಿತು.

ನಾಯಕಿ ಲಾರಾ ವೊಲ್ವಾರ್ಟ್ 55 ಎಸೆತಗಳಲ್ಲಿ 59 ರನ್‌ಗಳನ್ನು ಗಳಿಸಿದರೆ, ತಝ್ಮಿನ್ ಬ್ರಿಟ್ಸ್ 52 ಎಸೆತಗಳಲ್ಲಿ 57 ರನ್‌ಗಳನ್ನು ಸಿಡಿಸಿದರು.

ಇದಕ್ಕೂ ಮೊದಲು, ದಕ್ಷಿಣ ಆಫ್ರಿಕದ ಬೌಲರ್‌ಗಳು ಬಿಗು ಬೌಲಿಂಗ್ ದಾಳಿ ನಡೆಸಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಹೇಲಿ ಮ್ಯಾಥ್ಯೂಸ್ (11 ಎಸೆತಗಳಲ್ಲಿ 10 ರನ್) ಮೊದಲನೆಯದಾಗಿ ನಿರ್ಗಮಿಸಿದರು. ಅವರ ವಿಕೆಟನ್ನು ಮರಿಝಾನ್ ಕಾಪ್ ಪಡೆದರು.

ಬಳಿಕ ಕಿಯಾನಾ ಜೋಸೆಫ್ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ ಐದನೇ ಓವರ್‌ನಲ್ಲಿ ಅವರನ್ನು ಎಡಗೈ ಸ್ಪಿನ್ನರ್ ಮ್ಲಾಬಾ ಪೆವಿಲಿಯನ್‌ಗೆ ಕಳುಹಿಸಿದರು.

11 ಎಸೆತಗಳಲ್ಲಿ 13 ರನ್ ಗಳಿಸಿದ್ದ ಡಿಯಾಂಡ್ರಾ ಡಾಟಿನ್‌ರ ವಿಕೆಟನ್ನು ಕಾಪ್ ಪಡೆದಾಗ ವೆಸ್ಟ್ ಇಂಡೀಸ್ 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ, ವೆಸ್ಟ್ ಇಂಡೀಸ್‌ಗೆ ಎದುರಾಳಿಗಳಿಗೆ ಸವಾಲಾಗಬಲ್ಲ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.

ಕೇವಲ 29 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಉರುಳಿಸಿದ ದಕ್ಷಿಣ ಆಫ್ರಿಕದ ನೊಂಕುಲುಲೆಕೊ ಮ್ಲಾಬಾರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್ (20 ಓವರ್‌ಗಳಲ್ಲಿ) 118-6

ಹೇಲಿ ಮ್ಯಾಥ್ಯೂಸ್ 10, ಸ್ಟಫನೀ ಟೇಲರ್ 44 (ಅಜೇಯ), ಡಿಯಾಂಡ್ರಾ ಡಾಟಿನ್ 13, ಶೆಮೈನ್ ಕ್ಯಾಂಬೆಲ್ 17, ಝೈದಾ ಜೇಮ್ಸ್ (ಅಜೇಯ) 15

ನೊಂಕುಲುಲೆಕೊ ಮ್ಲಾಬಾ 4-29, ಮರಿಝಾನ್ ಕಾಪ್ 2-14

ದಕ್ಷಿಣ ಆಫ್ರಿಕ (17.5 ಓವರ್‌ಗಳಲ್ಲಿ) 119-0

ಲಾರಾ ವೊಲ್ವಾರ್ಡ್ (ಅಜೇಯ) 59, ಟಝ್ಮಿನ್ ಬ್ರಿಟ್ಸ್ (ಅಜೇಯ) 57

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News