ನಾಳೆ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಅಭಿಯಾನ ಆರಂಭ

Update: 2024-10-03 15:37 GMT

ಸಾಂದರ್ಭಿಕ ಚಿತ್ರ |  PC : PTI


ದುಬೈ: ನ್ಯೂಝಿಲ್ಯಾಂಡ್ ವಿರುದ್ಧ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ನಿರ್ಣಾಯಕ ಪಂದ್ಯವನ್ನಾಡುವ ಮೂಲಕ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ತನ್ನ ಅಭಿಯಾನವನ್ನು ಆರಂಭಿಸಲಿದೆ.

ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯಾವಳಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದ್ದು ಮೆಗಾ ಟೂರ್ನಮೆಂಟ್‌ನಲ್ಲಿ ಸಕಾರಾತ್ಮಕ ಆರಂಭದ ನಿರೀಕ್ಷೆಯಲ್ಲಿವೆ.

ಇದು 9ನೇ ಆವೃತ್ತಿಯ ಪಂದ್ಯಾವಳಿಯಾಗಿದ್ದು, ಭಾರತವು ತನ್ನ ಚೊಚ್ಚಲ ಟಿ-20 ಪ್ರಶಸ್ತಿ ಹಿಂಬಾಲಿಸುವುದನ್ನು ಮುಂದುವರಿಸಿದೆ. 2020ರಲ್ಲಿ ಫೈನಲ್‌ಗೆ ಲಗ್ಗೆ ಇಟ್ಟು ಪ್ರಶಸ್ತಿಯ ಸನಿಹ ತಲುಪಿದ್ದರೂ ಆಸ್ಟ್ರೇಲಿಯದ ಎದುರು 85 ರನ್‌ನಿಂದ ಸೋತಿತ್ತು.

ಭಾರತ ತಂಡವು ತನ್ನ ಹಿಂದಿನ ಕಹಿ ಘಟನೆಗಳನ್ನು ಮರೆತು ಪ್ರಸ್ತುತ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆಯುವತ್ತ ಚಿತ್ತಹರಿಸಿದೆ. ಭಾರತ ತಂಡ ಹಿಂದಿನ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ ಸದ್ಯ ಉತ್ತಮ ಫಾರ್ಮ್‌ನಲ್ಲಿದೆ. ಮತ್ತೊಂದೆಡೆ ಕಿವೀಸ್ ಪಡೆಯು ಹಿಂದಿನ ಐದೂ ಪಂದ್ಯಗಳಲ್ಲಿ ಸೋಲುಂಡಿದೆ. ಆದರೆ ವಿಶ್ವಕಪ್‌ನಲ್ಲಿ ತನಗೆ ಅದೃಷ್ಟ ಒಲಿಯಲಿದೆ ಎಂಬ ವಿಶ್ವಾಸದಲ್ಲಿದೆ.

ಬಹುಶಃ ತನ್ನ ಕೊನೆಯ ಟಿ20 ವಿಶ್ವಕಪ್ ಆಡುತ್ತಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತವು 2020ರಲ್ಲಿ ಮೆಲ್ಬರ್ನ್‌ನಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋಲು ಸಹಿತ ಹಲವು ಆಘಾತಕಾರಿ ಸೋಲಿನ ಅನುಭವವನ್ನು ಹೊಂದಿದೆ. ಈ ಬಾರಿ ತಂಡವು ತನ್ನ ಹಿಂದಿನ ತಪ್ಪನ್ನು ತಿದ್ದಿಕೊಂಡು ಪ್ರತಿಷ್ಠಿತ ಟ್ರೋಫಿ ಜಯಿಸುವ ಅದಮ್ಯ ವಿಶ್ವಾಸದಲ್ಲಿದೆ.

ಹಾಲಿ ಭಾರತದ ಮಹಿಳಾ ತಂಡದಲ್ಲಿ ಪ್ರತಿಭಾವಂತ ಆಟಗಾರ್ತಿಯರಿದ್ದಾರೆ. ಆಸ್ಟ್ರೇಲಿಯ ತಂಡದಲ್ಲಿ ಮಾತ್ರ ಇಂತಹ ಅಟಗಾರ್ತಿಯರಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯವು ಆರು ಬಾರಿ ವಿಶ್ವಕಪ್‌ನ್ನು ಜಯಿಸಿದರೆ, ಭಾರತವು ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ.

ಮಹತ್ವದ ಹೆಜ್ಜೆಯೊಂದರಲ್ಲಿ ಐಸಿಸಿ, ಮಹಿಳಾ ಕ್ರಿಕೆಟಿಗರಿಗೆ ಪುರುಷರಷ್ಟೇ ಸಮಾನ ಬಹುಮಾನ ಮೊತ್ತವನ್ನು ಘೋಷಿಸಿದ್ದು, ಕ್ರೀಡೆಗಳಲ್ಲಿ ಲಿಂಗ ಸಮಾನತೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ತಂಡವು ಪುರುಷರ ಕ್ರಿಕೆಟ್ ತಂಡ ಪಡೆದಷ್ಟೇ ಬಹುಮಾನ ಮೊತ್ತ ಸ್ವೀಕರಿಸಲಿದೆ. ಈ ಬಾರಿಯ ವಿಶ್ವಕಪ್ ವಿಜೇತ ತಂಡವು 2.34 ಮಿಲಿಯನ್ ಯುಎಸ್ ಡಾಲರ್ ಮನೆಗೊಯ್ಯಲಿದೆ.

ಪಂದ್ಯಾವಳಿಯಲ್ಲಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ತಂಡವು 4 ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಅ.17 ಹಾಗೂ 18ರಂದು ನಿಗದಿಯಾಗಿರುವ ಸೆಮಿ ಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ. ಫೈನಲ್ ಪಂದ್ಯವು ದುಬೈನಲ್ಲಿ ಅ.20ರಂದು ನಡೆಯಲಿದೆ.

ಭಾರತ ತಂಡವು ಎ ಗುಂಪಿನಲ್ಲಿದ್ದು, ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳಿಂದ ಸವಾಲು ಎದುರಿಸಲಿದೆ. ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ಮೊದಲ ಪಂದ್ಯವನ್ನು ಆಡಿದ ನಂತರ ಪಾಕಿಸ್ತಾನ(ಅ.6) ಹಾಗೂ ಶ್ರೀಲಂಕಾ(ಅ.9) ತಂಡಗಳ ವಿರುದ್ಧ ದುಬೈನಲ್ಲಿ ಆಡಲಿದೆ. ಬಹುನಿರೀಕ್ಷಿತ ಆಸ್ಟ್ರೇಲಿಯದ ವಿರುದ್ಧ ಪಂದ್ಯವನ್ನು ಅ.13ರಂದು ಶಾರ್ಜಾದಲ್ಲಿ ಆಡಲಿದೆ.

ಭಾರತ ಕ್ರಿಕೆಟ್ ತಂಡ ಈ ಬಾರಿ 2020ರ ರನ್ನರ್ಸ್ ಅಪ್‌ಗಿಂತ ಆಚೆ ಸಾಗುವ ಗುರಿ ಇಟ್ಟುಕೊಂಡಿದೆ. ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಜಯ ಸಾಧಿಸಿ ಈ ನಿಟ್ಟಿನಲ್ಲಿ ತಯಾರಿ ನಡೆಸಿದೆ.

ಪ್ರತಿ ಗುಂಪಿನಿಂದ ಕೇವಲ ಎರಡು ತಂಡಗಳು ಸೆಮಿ ಫೈನಲ್‌ಗೆ ತಲುಪುವ ಕಾರಣ ಆಸ್ಟ್ರೇಲಿಯ ಒಂದು ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸ್ಪರ್ಧೆಯಲ್ಲಿರಬೇಕಾದರೆ ಭಾರತವು ಎಲ್ಲಿಯೂ ಎಡವದಂತೆ ಎಚ್ಚರಿಕೆವಹಿಸಬೇಕಾಗಿದೆ.

ಪಿಚ್ ರಿಪೋರ್ಟ್

ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನ ಪಿಚ್ ಸಮತೋಲಿತವಾಗಿದ್ದು, ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ಸಮಾನವಾಗಿ ಸಹಕರಿಸಲಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಪಂದ್ಯ ಮುಂದುವರಿದಂತೆ ಬ್ಯಾಟರ್‌ಗಳಿಗೆ ಪಿಚ್ ನೆರವಾಗಬಹುದು. ಟಾಸ್ ಜಯಿಸಿದ ನಂತರ ಮೊದಲು ಬೌಲಿಂಗ್ ಮಾಡುವುದು ಉತ್ತಮ ನಿರ್ಧಾರವಾಗಲಿದೆ.

ಹೆಡ್-ಟು-ಹೆಡ್ ದಾಖಲೆಗಳು

ಆಡಿದ ಪಂದ್ಯಗಳು: 13

ಭಾರತ ಮಹಿಳಾ ತಂಡಕ್ಕೆ ಜಯ: 4

ನ್ಯೂಝಿಲ್ಯಾಂಡ್ ಮಹಿಳಾ ತಂಡಕ್ಕೆ ಗೆಲುವು: 9

ಮೊದಲ ಮುಖಾಮುಖಿ: ಜೂನ್ 18,2009

ಕೊನೆಯ ಮುಖಾಮುಖಿ: ಫೆಬ್ರವರಿ 9,2022

ಭಾರತದ ಸ್ಟಾರ್ ಆಟಗಾರ್ತಿಯರು

ಸ್ಮತಿ ಮಂಧಾನ

ಭಾರತದ ಮೊದಲ ಪಂದ್ಯದಲ್ಲಿ ಸ್ಮತಿ ಮಂಧಾನ ಶ್ರೇಷ್ಠ ಬ್ಯಾಟರ್ ಎನಿಸಿಕೊಳ್ಳುವ ಸಾಧ್ಯತೆಯಿದೆ. ಮಂಧಾನ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹಿಂದಿನ 10 ಪಂದ್ಯಗಳಲ್ಲಿ 328 ರನ್ ಗಳಿಸಿದ್ದಾರೆ. ಮಂಧಾನ ನ್ಯೂಝಿಲ್ಯಾಂಡ್ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಆರಂಭ ಒದಗಿಸುವ ಗುರಿ ಇಟ್ಟುಕೊಂಡಿದ್ದಾರೆ.

ರಾಧಾ ಯಾದವ್

ಮುಂಬರುವ ಪಂದ್ಯದಲ್ಲಿ ರಾಧಾ ಯಾದವ್ ಉತ್ತಮ ಬೌಲರ್ ಆಗಿ ಹೊರಹೊಮ್ಮಬಹುದು. ರಾಧಾ ಅವರು ಹಿಂದಿನ 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ರಾಧಾ ಭರ್ಜರಿ ಫಾರ್ಮ್‌ನಲ್ಲಿದ್ದು, ಅವರ ಸ್ಪೆಲ್ ಭಾರತ ಕ್ರಿಕೆಟ್ ತಂಡಕ್ಕೆ ನಿರ್ಣಾಯಕವಾಗಿದೆ.

ಪಂದ್ಯ ಆರಂಭದ ಸಮಯ: ರಾತ್ರಿ 7:30

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News