ಏಕದಿನ ಬೌಲರ್ ರ‍್ಯಾಂಕಿಂಗ್ಸ್ | ಮತ್ತೊಮ್ಮೆ ಅಗ್ರ ಸ್ಥಾನಕ್ಕೇರಿದ ಶಾಹೀನ್ ಅಫ್ರಿದಿ
ದುಬೈ: ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಐಸಿಸಿ ಪುರುಷರ ಏಕದಿನ ಬೌಲರ್ ರ‍್ಯಾಂಕಿಂಗ್ಸ್‌ನಲ್ಲಿ ನಂ.1 ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಶ್ರೇಷ್ಠ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡವು ರ‍್ಯಾಂಕಿಂಗ್ ನಲ್ಲಿ ಮಹತ್ವದ ಸಾಧನೆ ಮಾಡಿದೆ. ಇಂಗ್ಲೆಂಡ್ ಹಾಗೂ ಶ್ರೀಲಂಕಾದ ಟಿ20 ಆಟಗಾರರು ತಮ್ಮ ರ‍್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಇತ್ತೀಚೆಗೆ ನಡೆದಿದ್ದ ಸರಣಿಯಲ್ಲಿ 3 ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ ಗಳನ್ನು ಉರುಳಿಸಿ ಅಮೋಘ ಪ್ರದರ್ಶನ ನೀಡಿದ್ದ ಅಫ್ರಿದಿ ಅವರು ಅಗ್ರಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಮೂರು ಸ್ಥಾನ ಮೇಲಕ್ಕೇರಿದ ಅಫ್ರಿದಿ ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್ ರನ್ನು ಹಿಂದಿಕ್ಕಿದರು. ಮಹಾರಾಜ್ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಅಫ್ಘಾನಿಸ್ತಾನದ ರಶೀದ್ ಖಾನ್ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಅಫ್ರಿದಿ ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ ವೇಳೆ ನಂ.1 ರ‍್ಯಾಂಕ್ ತಲುಪಿದ್ದರು. ಅಫ್ರಿದಿ ಅವರ ಸಹ ಆಟಗಾರ ಹಾರಿಸ್ ರವೂಫ್ 14 ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ತಲುಪಿದ್ದಾರೆ. ಆಸ್ಟ್ರೇಲಿಯ ವಿರುದ್ಧ 10 ವಿಕೆಟ್ ಗಳನ್ನು ಪಡೆದು ಸರಣಿಶ್ರೇಷ್ಠ ಗೌರವ ಸ್ವೀಕರಿಸಿರುವ ರವೂಫ್ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ನಸೀಂ ಶಾ 14 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 55ನೇ ರ‍್ಯಾಂಕ್ ಗೆ ತಲುಪಿದ್ದಾರೆ.
ಅಫ್ರಿದಿ ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪಾಕಿಸ್ತಾನ ತಂಡವು ಏಕದಿನ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಗ್ರ ರ್ಯಾಂಕಿನ ಆಟಗಾರನನ್ನು ಹೊಂದಿದಂತಾಗಿದೆ. ಆಸ್ಟ್ರೇಲಿಯ ವಿರುದ್ಧ 80 ರನ್ ಗಳಿಸಿರುವ ಮಾಜಿ ನಾಯಕ ಬಾಬರ್ ಆಝಮ್ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಪಾಕ್‌ನ ಹೊಸ ನಾಯಕ ಮುಹಮ್ಮದ್ ರಿಝ್ವಾನ್ 2 ಸ್ಥಾನ ಮೇಲಕ್ಕೇರಿ 23ನೇ ಸ್ಥಾನ ಹಂಚಿಕೊಂಡಿದ್ದಾರೆ.
ಏಕದಿನ ಆಲ್‌ರೌಂಡರ್ ರ‍್ಯಾಂಕಿಂಗ್ ನಲ್ಲಿ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ. ಮೆಹದಿ (4ನೇ ಸ್ಥಾನ)ಹಾಗೂ ಉಮರ್ಝೈ(9ನೇ ಸ್ಥಾನ)ಪ್ರಗತಿ ಸಾಧಿಸಿದ್ದಾರೆ.