2025ರ ಚಾಂಪಿಯನ್ಸ್ ಟ್ರೋಫಿಯ ನಂತರ ಮುಹಮ್ಮದ್ ನಬಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ

Update: 2024-11-12 15:46 GMT

 ಮುಹಮ್ಮದ್ ನಬಿ | PC : X 

ಶಾರ್ಜಾ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ನಂತರ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿಯಾಗುವೆ ಎಂದು ಅಫ್ಘಾನಿಸ್ತಾನದ ಆಲ್‌ರೌಂಡರ್ ಮುಹಮ್ಮದ್ ನಬಿ ಘೋಷಿಸಿದ್ದಾರೆ.

ಸೋಮವಾರ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ 2-1 ಅಂತರದಿಂದ ಸರಣಿ ಜಯಿಸಿದ ನಂತರ ಮಾತನಾಡಿದ 39ರ ಹರೆಯದ ನಬಿ, ಕಳೆದ ವರ್ಷದ ಏಕದಿನ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಯೋಚಿಸಿದ್ದೆ ಎಂದಿದ್ದಾರೆ.

ಕಳೆದ ವರ್ಷದ ವಿಶ್ವಕಪ್ ವೇಳೆಯೇ ನನ್ನ ಮನಸ್ಸಿನಲ್ಲಿ ನಿವೃತ್ತಿಯ ಯೋಚನೆ ಹೊಳೆದಿತ್ತು. ನಾವು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ನಂತರ ಅಲ್ಲಿ ಕೊನೆಯ ಪಂದ್ಯ ಆಡುವುದು ಉತ್ತಮ ಎಂದು ಭಾವಿಸಿದೆ ಎಂದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ನಂತರ ನಬಿ ಹೇಳಿದ್ದಾರೆ.

ನಬಿ 2009ರ ನಂತರ 167 ಏಕದಿನ ಪಂದ್ಯಗಳನ್ನು ಆಡಿದ್ದು, 147 ಇನಿಂಗ್ಸ್‌ಗಳಲ್ಲಿ 3,600 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 17 ಅರ್ಧಶತಕಗಳಿವೆ. 136 ಸರ್ವಾಧಿಕ ಸ್ಕೋರಾಗಿದೆ.

ಬೌಲಿಂಗ್‌ನಲ್ಲಿ 161 ಇನಿಂಗ್ಸ್‌ಗಳಲ್ಲಿ 4.27ರ ಇಕಾನಮಿ ರೇಟ್‌ನಲ್ಲಿ 172 ವಿಕೆಟ್‌ಗಳನ್ನು ಉರುಳಿಸಿದ್ದು, ಇದರಲ್ಲಿ 4 ಬಾರಿ 4 ವಿಕೆಟ್ ಹಾಗೂ ಒಂದು ಬಾರಿ ಐದು ವಿಕೆಟ್(5-17) ಪಡೆದಿದ್ದಾರೆ.

ಕಳೆದ ವರ್ಷ ವಿಶ್ವಕಪ್‌ನಲ್ಲಿ ಆರನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ 8 ತಂಡಗಳು ಭಾಗವಹಿಸುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ ತಂಡ ಇದೇ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News