ಆಸ್ಟ್ರೇಲಿಯದಲ್ಲಿ ಭಾರತ ತಂಡಕ್ಕೆ 4-0 ಗೆಲುವು ದೂರದ ಕನಸು : ಸಂಜಯ್ ಮಾಂಜ್ರೇಕರ್

Update: 2024-11-13 17:08 GMT

ಸಂಜಯ್ ಮಾಂಜ್ರೇಕರ್ | PC : X 

ಹೊಸದಿಲ್ಲಿ : ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ 0-3 ಅಂತರದಿಂದ ಕ್ಲೀನ್‌ಸ್ವೀಪ್‌ಗೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಅವಕಾಶಕ್ಕೆ ತೀವ್ರ ಹಿನ್ನಡೆಯಾಗಿದೆ. ಭಾರತ ತಂಡ 2025ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ನೇರ ಅರ್ಹತೆ ಪಡೆಯಬೇಕಾದರೆ ಆಸ್ಟ್ರೇಲಿಯದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ.

ಆಸ್ಟ್ರೇಲಿಯದಲ್ಲಿ ಭಾರತದ ಅವಕಾಶದ ಬಗ್ಗೆ ಮಾಜಿ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಹಾಗೂ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಮಾತನಾಡಿರುವ ಮುಂಬರುವ ಕಾರ್ಯಕ್ರಮದ ದೃಶ್ಯವೊಂದನ್ನು ಅಧಿಕೃತ ಪ್ರಸಾರಕ ಹಂಚಿಕೊಂಡಿದೆ.

ಚಾಂಪಿಯನ್ ವೆಸ್ಟ್‌ಇಂಡೀಸ್ ಸಹಿತ ಯಾವ ತಂಡ ಕೂಡ ಈ ಹಿಂದೆ ಆಸ್ಟ್ರೇಲಿಯವನ್ನು 4-0 ಅಂತರದಿಂದ ಮಣಿಸಿಲ್ಲ. ಭಾರತ ತಂಡದಲ್ಲಿ ರೋಹಿತ್ ಶರ್ಮಾರಂತಹ ಉತ್ತಮ ನಾಯಕನಿದ್ದಾರೆ. ರಿಷಭ್ ಪಂತ್‌ಗೆ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿದೆ. ನ್ಯೂಝಿಲ್ಯಾಂಡ್ ವಿರುದ್ಧ ಆಗಿರುವ ಕಹಿ ಅನುಭವವನ್ನು ಮರೆತು ಈ ಹಿಂದೆ ಹಲವು ಬಾರಿ ಆಸ್ಟ್ರೇಲಿಯ ಪ್ರವಾಸದಲ್ಲಿ ನೀಡಿದಂತಹ ಶ್ರೇಷ್ಠ ಪ್ರದರ್ಶನ ಪುನರಾವರ್ತಿಸುತ್ತೇವೆ ಎಂಬ ನಂಬಿಕೆಯಲ್ಲಿ ಭಾರತ ತಂಡ ಆಡಬೇಕಾಗಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಆಸ್ಟ್ರೇಲಿಯದಲ್ಲಿ 4-0 ಅಂತರದಿಂದ ಗೆಲ್ಲುವುದು ದೂರದ ಕನಸು. ಪರ್ತ್ ಹಾಗೂ ಅಡಿಲೇಡ್‌ನಲ್ಲಿ ನಡೆಯುವ ಮೊದಲೆರಡು ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ಕಷ್ಟಕರವಾಗಬಹುದು. ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪೈಕಿ ಒಬ್ಬರ ಅಗತ್ಯವಿದೆ. ಕಳೆದ ಕೆಲವು ವರ್ಷಗಳಿಂದ ಬೌಲಿಂಗ್ ವಿಭಾಗವು ಭಾರತದ ದೊಡ್ಡ ಶಕ್ತಿಯಾಗಿತ್ತು. ಈ ಬಾರಿ ಮುಹಮ್ಮದ್ ಶಮಿ ಆಡುತ್ತಿಲ್ಲ. ಶಮಿ ಅನುಪಸ್ಥಿತಿಯಲ್ಲಿ ಭಾರತವು ಆಕಾಶ್ ದೀಪ್, ಹರ್ಷಿತ್ ರಾಣಾ, ನಿತಿಶ್ ಕುಮಾರ್ ರೆಡ್ಡಿ ಹಾಗೂ ಪ್ರಸಿದ್ಧ ಕೃಷ್ಣರಂತಹ ಅನನುಭವಿ ವೇಗಿಗಳನ್ನು ಆಯ್ಕೆ ಮಾಡಿದ್ದು, ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಅನುಭವಿ ಬೌಲರ್‌ ಗಳಾಗಿದ್ದಾರೆ ಎಂದು ಮಾಂಜ್ರೇಕರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News