ಭುವನೇಶ್ವರ್ ಕುಮಾರ್ ದಾಖಲೆ ಮುರಿದ ಅರ್ಷದೀಪ್

Update: 2024-11-14 06:01 GMT

ಅರ್ಷದೀಪ್ ಸಿಂಗ್ (Photo:X/BCCI) 

ಹೊಸದಿಲ್ಲಿ: ಒತ್ತಡದ ಪರಿಸ್ಥಿತಿಯಲ್ಲೂ ಭಾರತದ ವೇಗಿ ಅರ್ಷದೀಪ್ ಸಿಂಗ್ ಅವರ ಅದ್ಭುತ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 11 ರನ್‍ಗಳ ರೋಚಕ ಜಯ ಸಾಧಿಸಿದೆ. ಸೆಂಚೂರಿಯನ್ ಪಾರ್ಕ್‍ನಲ್ಲಿ ನಡೆದ ಪಂದ್ಯದಲ್ಲಿ 220 ರನ್‍ಗಳ ಗುರಿ ನೀಡಿದ್ದ ಭಾರತ, ಎದುರಾಳಿಗಳನ್ನು 208 ರನ್‍ಗಳಿಗೆ ನಿಯಂತ್ರಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಗಳಿಸಿತು.

ಕೇವಲ 16 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಗಳಿಸಿದ ಮಾರ್ಕೊ ಜಾನ್ಸೆನ್ ಅವರನ್ನು ಕೊನೆಯ ಓವರ್ ನಲ್ಲಿ ಔಟ್ ಮಾಡುವ ಮೂಲಕ ಭಾರತದ ಮೇಲುಗೈಗೆ ಅರ್ಷದೀಪ್ ಕಾರಣರಾದರು. ಹಾರ್ದಿಕ್ ಪಾಂಡ್ಯ ಅವರ ಓವರ್ ನಲ್ಲಿ 26 ರನ್‍ಗಳನ್ನು ಸೂರೆಗೊಂಡ ಜಾನ್ಸೆನ್, ಅಸಾಧ್ಯ ಗೆಲುವಿನ ಸನಿಹಕ್ಕೆ ತಂಡವನ್ನು ಮುನ್ನಡೆಸಿದರು. ಆದರೆ ಕೊನೆಯ ಓವರ್ ನಲ್ಲಿ ಕೂಡಾ ನಿಖರ ಬೌಲಿಂಗ್ ಮೂಲಕ ಅರ್ಷದೀಪ್ ಜಾನ್ಸೆನ್ ವಿಕೆಟ್ ಕಬಳಿಸಿ, ಭಾರತದ ಜಯ ಖಾತರಿಪಡಿಸಿದರು.

37 ರನ್‍ಗಳಿಗೆ 3 ವಿಕೆಟ್ ಕಿತ್ತ ಅರ್ಷದೀಪ್, ಭುವನೇಶ್ವರ ಕುಮಾರ್ ಅವರ 90 ವಿಕೆಟ್‍ಗಳ ದಾಖಲೆಯನ್ನು ಅಳಿಸಿ, ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಟಿ20 ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅರ್ಷದೀಪ್ ಕೇವಲ 59 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದರೆ ಭುವನೇಶ್ವರ ಕುಮಾರ್ 87 ಪಂದ್ಯಗಳಲ್ಲಿ 90 ವಿಕೆಟ್ ಗಳಿಸಿದ್ದಾರೆ. 92 ವಿಕೆಟ್ ಪಡೆದಿರುವ ಅರ್ಷದೀಪ್ ಇದೀಗ ಒಟ್ಟಾರೆ ಅಗ್ರಗಣ್ಯ ಭಾರತೀಯ ಬೌಲರ್ ಗಳ ಪೈಕಿ ಯಜುವೇಂದ್ರ ಚಾಹಲ್ ಅವರ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಚಾಹಲ್ 80 ಪಂದ್ಯಗಳಿಂದ 96 ವಿಕೆಟ್ ಪಡೆದಿದ್ದಾರೆ. ಶುಕ್ರವಾರ ಸರಣಿಯ ಕೊನೆಯ ಪಂದ್ಯ ನಡೆಯಲಿದೆ.

ಇದಕ್ಕೂ ಮುನ್ನ ಭಾರತ, ತಿಲಕ್ ವರ್ಮಾ (56 ಎಸೆತಗಳಲ್ಲಿ 107) ಮತ್ತು ಅಭಿಷೇಕ್ ಶರ್ಮಾ (25 ಎಸೆತಗಳಲ್ಲಿ 50) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News