ನಾಳೆ ನಾಲ್ಕನೇ ಟಿ20 ಪಂದ್ಯ | ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲುವಿನತ್ತ ಭಾರತದ ಚಿತ್ತ

Update: 2024-11-14 15:40 GMT

PC : X \ @BCCI

ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಾಲ್ಕನೇ ಹಾಗೂ ಅಂತಿಮ ಟಿ20 ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲಿರುವ ಟೀಮ್ ಇಂಡಿಯಾವು ಮತ್ತೊಂದು ದ್ವಿಪಕ್ಷೀಯ ಸರಣಿ ಗೆಲ್ಲುವತ್ತ ಚಿತ್ತಹರಿಸಿದೆ.

ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಅವರ ಶತಕದ ಕೊಡುಗೆಯ ನೆರವಿನಿಂದ ಭಾರತ ತಂಡವು ಸರಣಿಯಲ್ಲಿ ಸದ್ಯ 2-1 ಮುನ್ನಡೆ ಸಾಧಿಸಿದೆ. ಮತ್ತೊಂದು ಪಂದ್ಯವನ್ನು ಜಯಿಸಿ 3-1 ಅಂತರದಿಂದ ಸರಣಿ ಗೆಲ್ಲುವ ಅದಮ್ಯ ವಿಶ್ವಾಸದಲ್ಲಿದೆ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತವು ಕೆಲವು ಸಿಹಿ ನೆನಪನ್ನು ಹೊಂದಿದೆ. 2007ರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಇದೇ ಮೈದಾನದಲ್ಲಿ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.

ಕಳೆದ ವರ್ಷ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಶತಕ ಗಳಿಸಿದ್ದು, ಪರಿಣಾಮವಾಗಿ ಭಾರತ ತಂಡವು ಟಿ20 ಸರಣಿಯನ್ನು ಜಯಿಸಿತ್ತು.

ಸೂರ್ಯಕುಮಾರ್ ಅವರು 16 ಪಂದ್ಯಗಳಲ್ಲಿ 13ರಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿದ್ದಾರೆ.

ಶ್ರೇಷ್ಠ ಟಿ20 ಕ್ರಿಕೆಟ್ ಆಟಗಾರನಾಗಿರುವ ರಿಂಕು ಸಿಂಗ್ ಇತ್ತೀಚೆಗೆ ಫಾರ್ಮ್ ಕಳೆದುಕೊಂಡಿರುವುದು ನಾಯಕ ಸೂರ್ಯಕುಮಾರ್ ಹಾಗೂ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್‌ಗೆ ತಲೆನೋವು ತಂದಿದೆ.

ಅಲಿಗಢದ ಬ್ಯಾಟರ್ ರಿಂಕು ಸಿಂಗ್ ಪ್ರಸಕ್ತ ಸರಣಿಯಲ್ಲಿ 28 ರನ್ ಗಳಿಸಿದ್ದು, ಎರಡು ಪಂದ್ಯಗಳಲ್ಲಿ 6ನೇ ಹಾಗೂ ಮತ್ತೊಂದು ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಸ್ಪೆಷಲಿಸ್ಟ್ ಫಿನಿಶರ್ ಎಂದು ಪರಿಗಣಿಸಲ್ಪಟ್ಟಿರುವ ರಿಂಕು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದಾಗಲೆಲ್ಲ ಉತ್ತಮ ಪ್ರದರ್ಶನ ನೀಡಿದ್ದಾರೆ. ತಿಲಕ್ ವರ್ಮಾ ಇದೀಗ 3ನೇ ಕ್ರಮಾಂಕದಲ್ಲಿ ಮಿಂಚುತ್ತಿದ್ದು, ಸಂಜು ಸ್ಯಾಮ್ಸನ್ ಆರಂಭಿಕ ಸ್ಥಾನದಲ್ಲಿದ್ದಾರೆ.

ಭಾರತ ತಂಡವು ಮೊದಲ 3 ಪಂದ್ಯಗಳಲ್ಲಿ 15 ಆಟಗಾರರಲ್ಲಿ 12 ಆಟಗಾರರನ್ನು ಬಳಸಿಕೊಂಡಿದೆ. ಹೊಸ ಮುಖಗಳಾದ ವೈಶಾಕ್ ವಿಜಯಕುಮಾರ್ ಹಾಗೂ ಯಶ್ ದಯಾಳ್ ಹೆಚ್ಚುವರಿ ಸ್ಪೆಷಲಿಸ್ಟ್ ವೇಗಿಗಳಾಗಿ ಮೊದಲ ಬಾರಿ 4ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆಯೇ ಎಂದು ನೋಡಬೇಕಾಗಿದೆ.

ವಿಕೆಟ್ ಕೀಪಿಂಗ್ ಹೊರತುಪಡಿಸಿ ಮೈದಾನದಲ್ಲಿ ಎಲ್ಲ ಸ್ಥಾನಗಳಲ್ಲಿ ನಿಂತು ಫೀಲ್ಡಿಂಗ್ ಮಾಡುವ ಕೌಶಲ್ಯವಿರುವ ರಮಣ್‌ದೀಪ್ ಸಿಂಗ್ ಉಪಯುಕ್ತ ಆಟಗಾರನಾಗಿದ್ದಾರೆ. 3ನೇ ಪಂದ್ಯದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News