ಅಶ್ವಿನ್ ಬದಲಿಗೆ ಭಾರತ ತಂಡ ಸೇರಲು ಮುಂಬೈ ಕನ್ನಡಿಗ ತನುಷ್ ಕೋಟ್ಯಾನ್ ಸಜ್ಜು
ಅಹ್ಮದಾಬಾದ್: ಮುಂಬೈನ ಆಲ್‌ರೌಂಡರ್ ತನುಷ್ ಕೋಟ್ಯಾನ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗಿಂತ ಮೊದಲು ಭಾರತೀಯ ಕ್ರಿಕೆಟ್ ತಂಡವನ್ನು ಸೇರಲು ಸಜ್ಜಾಗಿದ್ದಾರೆ. ಈ ಕುರಿತು ಅಧಿಕೃತವಾಗಿ ಹೇಳಿಕೆ ಬಿಡುಗಡೆಯಾಗಿಲ್ಲದಿದ್ದರೂ ಮುಂಬೈ ಕನ್ನಡಿಗ ಕೋಟ್ಯಾನ್ ಅವರಿಗೆ ಆಸ್ಟ್ರೇಲಿಯಕ್ಕೆ ಮಂಗಳವಾರ ಪ್ರಯಾಣಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.
ಆಫ್ ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಕೋಟ್ಯಾನ್ ಅವರು ಸದ್ಯ ಅಹ್ಮದಾಬಾದ್‌ನಲ್ಲಿ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಲು ಮುಂಬೈ ತಂಡದೊಂದಿಗಿದ್ದಾರೆ.
ಆರ್.ಅಶ್ವಿನ್ ಕಳೆದ ವಾರ ಬ್ರಿಸ್ಬೇನ್‌ನಲ್ಲಿ ದಿಢೀರ್ ನಿವೃತ್ತಿ ಪ್ರಕಟಿಸಿದ ಹಿನ್ನೆಲೆಯಲ್ಲಿ 26ರ ಹರೆಯದ ಕೋಟ್ಯಾನ್ ಆಸ್ಟ್ರೇಲಿಯಕ್ಕೆ ನಿರ್ಗಮಿಸಲಿದ್ದಾರೆ. ಅಶ್ವಿನ್ ಬದಲಿಗೆ ಭಾರತ ತಂಡವನ್ನು ಸೇರುವ ಸಾಧ್ಯತೆ ಇದೆ.
ಕೋಟ್ಯಾನ್ ಭಾರತದ ದೇಶೀಯ ಕ್ರಿಕೆಟ್ ವಲಯದಲ್ಲಿ ಓರ್ವ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ. 2023-24ರ ರಣಜಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಒಟ್ಟು 29 ವಿಕೆಟ್‌ಗಳನ್ನು ಹಾಗೂ 5 ಅರ್ಧಶತಕ ಹಾಗೂ 1 ಶತಕದ ಸಹಿತ 502 ರನ್ ಗಳಿಸುವ ಮೂಲಕ ಮುಂಬೈ ತಂಡವು 42ನೇ ಬಾರಿ ರಣಜಿ ಪ್ರಶಸ್ತಿ ಗೆಲ್ಲಲು ಮಹತ್ವದ ಕೊಡುಗೆ ನೀಡಿದ್ದರು. ಈ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಿಂತ ಮೊದಲೇ ಭಾರತದ ಎ ತಂಡದೊಂದಿಗೆ ಕೋಟ್ಯಾನ್ ಅವರು ಆಸ್ಟ್ರೇಲಿಯಕ್ಕೆ ಪ್ರಯಾಣಿಸಿದ್ದರು.
ಕೋಟ್ಯಾನ್ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ನಂತರ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಮುಂಬೈನ ಮೊದಲ ಸ್ಪಿನ್ನರ್ ಆಗಿದ್ದಾರೆ.
►ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನುಷ್ ಕೋಟ್ಯಾನ್ ಸಾಧನೆ
ಪಂದ್ಯಗಳು: 33
ರನ್: 2,523
ಬ್ಯಾಟಿಂಗ್ ಸರಾಸರಿ: 41.21
ವಿಕೆಟ್‌ಗಳು: 101
ಬೌಲಿಂಗ್ ಸರಾಸರಿ: 25.70