ವೇಗದ ಶತಕದಿಂದ ಗರಿಷ್ಠ ಸ್ಕೋರ್ ತನಕ: ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆಗಳದ್ದೇ ಸದ್ದು
ಹೊಸದಿಲ್ಲಿ: ಸೀಮಿತ ಓವರ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಟಗಾರರು ಇತಿಹಾಸ ನಿರ್ಮಿಸುವ ಮೂಲಕ ಭಾರತೀಯ ದೇಶೀಯ ಕ್ರಿಕೆಟ್ ಈ ಋತುವಿನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ದೇಶೀಯ ಪಂದ್ಯಾವಳಿಗಳಿಗೆ ಬಿಸಿಸಿಐ ಹೆಚ್ಚು ಮಹತ್ವ ನೀಡಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದ ಅಂತರ್‌ರಾಷ್ಟ್ರೀಯ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರಬೇಕೆಂಬ ಬಿಸಿಸಿಐ ನಿಯಮ ಫಲ ನೀಡಿದೆ. ಇದು ಪಂದ್ಯಾವಳಿಯನ್ನು ಎಲ್ಲರ ಗಮನ ಸೆಳೆದಿದ್ದಲ್ಲದೆ, ಆಟಗಾರರಿಗೆ ಅಸಾಮಾನ್ಯ ಪ್ರದರ್ಶನ ನೀಡಲು ಸ್ಫೂರ್ತಿಯಾಗಿದೆ.
ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗೂ ಮುಹಮ್ಮದ್ ಶಮಿ ಅವರಂತಹ ಕ್ರಿಕೆಟಿಗರು ಈ ಎಲ್ಲ ಟೂರ್ನಿಗಳಿಗೆ ತಾರಾ ಮೆರುಗನ್ನು ನೀಡಿದ್ದಾರೆ. ಇತ್ತೀಚೆಗೆ ಕೊನೆಗೊಂಡಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯ ತನಕ ಅಭೂತಪೂರ್ವವಾಗಿ ದಾಖಲೆಗಳು ಪತನವಾಗುತ್ತಲೇ ಇವೆ.
ಭಾರತದ ಪ್ರಮುಖ ಟಿ-20 ಪಂದ್ಯಾವಳಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ತಂಡವು ಪ್ರಶಸ್ತಿ ಜಯಿಸಿತ್ತು. ಆದರೆ ಪಂದ್ಯಾವಳಿಯ ವೇಳೆ ದಾಖಲೆಗಳನ್ನು ಮುರಿದ ಸುದ್ದಿಗಳು ಹೆಚ್ಚು ರಾರಾಜಿಸಿದವು.
ವಿಜಯ್ ಹಝಾರೆ ಟ್ರೋಫಿಯಲ್ಲಿ ಮೊದಲ ದಿನವಾದ ಶನಿವಾರ ಪಂಜಾಬ್‌ನ ಬ್ಯಾಟರ್ ಅನ್ಮೋಲ್ ಪ್ರೀತ್ ಸಿಂಗ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಸಿಂಗ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಅಹ್ಮದಾಬಾದ್‌ನಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕೇವಲ 35 ಎಸೆತಗಳಲ್ಲಿ ವೇಗದ ಶತಕ ಗಳಿಸಿದ್ದರು.
►► ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪತನಗೊಂಡ ಪ್ರಮುಖ ದಾಖಲೆಗಳು
► ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಟೀಮ್ ಸ್ಕೋರ್:
ಕೃನಾಲ್ ಪಾಂಡ್ಯ ನೇತೃತ್ವದ ಬರೋಡಾ ತಂಡವು ಇಂದೋರ್‌ನಲ್ಲಿ ಸಿಕ್ಕಿಂ ವಿರುದ್ಧ 5 ವಿಕೆಟ್‌ಗಳ ನಷ್ಟಕ್ಕೆ 349 ರನ್ ಗಳಿಸಿದ್ದು, ಇದು ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ಭಾನು ಪಾನಿಯಾ 51 ಎಸೆತಗಳಲ್ಲಿ 134 ರನ್ ಗಳಿಸಿ ಬರೋಡಾ ತಂಡವು ಈ ವರ್ಷ ಜಾಂಬಿಯಾ ವಿರುದ್ಧ ಝಿಂಬಾಬ್ವೆ ನಿರ್ಮಿಸಿದ್ದ ಜಾಗತಿಕ ದಾಖಲೆ(344/4)ಮುರಿಯಲು ನೆರವಾದರು.
ಭಾರತದ ದೇಶೀಯ ತಂಡವೊಂದು ಇದೇ ಮೊದಲ ಬಾರಿ ಟಿ20 ಪಂದ್ಯದಲ್ಲಿ 300ಕ್ಕೂ ಅಧಿಕ ರನ್ ಗಳಿಸಿದೆ. 2023ರಲ್ಲಿ ಆಂಧ್ರ ವಿರುದ್ಧ ಪಂಜಾಬ್ ನಿರ್ಮಿಸಿದ್ದ ದಾಖಲೆ(275/6)ಪತನವಾಗಿದೆ.
► ಟಿ-20 ಇನಿಂಗ್ಸ್‌ಗಳಲ್ಲಿ ಗರಿಷ್ಠ ಸಿಕ್ಸರ್‌ಗಳು:
ಬರೋಡಾ ತಂಡವು ತನ್ನ ಇನಿಂಗ್ಸ್‌ನಲ್ಲಿ 37 ಸಿಕ್ಸರ್‌ಗಳನ್ನು ಸಿಡಿಸಿದ್ದು, ಝಿಂಬಾಬ್ವೆಯ ಹಿಂದಿನ ದಾಖಲೆ(27)ಪುಡಿಗಟ್ಟಿತು. ಭಾನು 15 ಸಿಕ್ಸರ್‌ಗಳನ್ನು ಸಿಡಿಸಿದರೆ, ಶಿವಾಲಿಕ್ ಶರ್ಮಾ ಹಾಗೂ ವಿಷ್ಣು ಸೋಲಂಕಿ ತಲಾ 6 ಸಿಕ್ಸರ್‌ಗಳನ್ನು ಸಿಡಿಸಿದರು.
► ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಅಂತರದ ಗೆಲುವು(ರನ್):
ಬರೋಡಾ ತಂಡವು ಸಿಕ್ಕಿಂ ತಂಡವನ್ನು 263 ರನ್ ಅಂತರದಿಂದ ಮಣಿಸಿದ್ದು, ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಅಂತರದ ಜಯ ದಾಖಲಿಸಿ ನೂತನ ದಾಖಲೆ ನಿರ್ಮಿಸಿತು. ಜಾಗತಿಕ ದಾಖಲೆಯು(290 ರನ್) ಝಿಂಬಾಬ್ವೆ ತಂಡದ ಹೆಸರಲ್ಲಿದೆ.
►ಭಾರತೀಯರಿಂದ ವೇಗದ ಟಿ20 ಶತಕಗಳು:
ಗುಜರಾತ್‌ನ ಉರ್ವಿಲ್ ಪಟೇಲ್ ಹಾಗೂ ಪಂಜಾಬ್‌ನ ಅಭಿಷೇಕ್ ಶರ್ಮಾ ಇಬ್ಬರೂ ಕೂಡ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಭಾರತೀಯರಿಬ್ಬರು ವೇಗದ ಜಂಟಿ ಟಿ20 ಶತಕ ದಾಖಲಿಸಿದರು. ಜಾಗತಿಕ ಮಟ್ಟದಲ್ಲಿ ಇಸ್ಟೋನಿಯದ ಸಾಹಿಲ್ ಚೌಹಾಣ್ ಅವರ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
►ಟಿ-20 ಪಂದ್ಯದಲ್ಲಿ ಗರಿಷ್ಠ ಬೌಲರ್‌ಗಳ ಬಳಕೆ:
ವಾಂಖೆಡೆಯಲ್ಲಿ ಮಣಿಪುರ ವಿರುದ್ಧ ನಡೆದ ಪಂದ್ಯದಲ್ಲಿ ದಿಲ್ಲಿ ತಂಡವು ಎಲ್ಲ 11 ಆಟಗಾರರನ್ನು ಬೌಲರ್ ಆಗಿ ಬಳಸಿಕೊಂಡು ಇತಿಹಾಸ ರಚಿಸಿತು. ಮಣಿಪುರ ತಂಡ 7 ಬೌಲರ್‌ಗಳನ್ನು ದಾಳಿಗಿಳಿಸಿತ್ತು. ಒಂದೇ ಟಿ20 ಪಂದ್ಯದಲ್ಲಿ 18 ಬೌಲರ್‌ಗಳನ್ನು ಬಳಸುವ ಮೂಲಕ ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಾಣವಾಯಿತು.