ಎಂಸಿಜಿಯಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ದಾಖಲೆ
ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಶೇ.60ರಷ್ಟು ಗೆಲುವಿನ ದಾಖಲೆ ಹೊಂದಿರುವ ಆಸ್ಟ್ರೇಲಿಯ ತಂಡವು ಗುರುವಾರ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ. ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡವು 295 ರನ್ ಅಂತರದಿಂದ ಗೆದ್ದುಕೊಂಡರೆ, ಅಡಿಲೇಡ್‌ನಲ್ಲಿ 10 ವಿಕೆಟ್‌ಗಳಿಂದ ಜಯ ಸಾಧಿಸಿದ್ದ ಆಸ್ಟ್ರೇಲಿಯ ತಂಡ ತಿರುಗೇಟು ನೀಡಿ ಸರಣಿಯನ್ನು ಸಮಬಲಗೊಳಿಸಿತ್ತು. ಬ್ರಿಸ್ಬೇನ್‌ನಲ್ಲಿ 3ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡ್ರಾನಲ್ಲಿ ಅಂತ್ಯಗೊಂಡಿದೆ.
ಎರಡೂ ತಂಡಗಳಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ವಿಶ್ವಾಸ ಹೆಚ್ಚಾಗಲು ಎಂಸಿಜಿ ಹಾಗೂ ಸಿಡ್ನಿ ಕ್ರಿಕೆಟ್ ಮೈದಾನಗಳಲ್ಲಿ ನಡೆಯುವ ಉಳಿದ ಎರಡೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.
► ಎಂಸಿಜಿಯಲ್ಲಿ ಆಸ್ಟ್ರೇಲಿಯದ ದಾಖಲೆ
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ತಂಡವು 116 ಪಂದ್ಯಗಳನ್ನು ಆಡಿದ್ದು, 67ರಲ್ಲಿ ಗೆಲುವು ಹಾಗೂ 32ರಲ್ಲಿ ಸೋತಿದೆ. ಉಳಿದ 17 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಗೆಲುವಿನ ದರ ಶೇ.57.75ರಷ್ಟಿದೆ.
ಎಂಸಿಜಿಯಲ್ಲಿ 2016ರಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯ ತಂಡವು ಗರಿಷ್ಠ ಸ್ಕೋರ್ ಗಳಿಸಿತ್ತು. ಆಗ ಡೇವಿಡ್ ವಾರ್ನರ್(144 ರನ್) ಹಾಗೂ ಸ್ಟೀವ್ ಸ್ಮಿತ್(ಔಟಾಗದೆ 165), ಮಿಚೆಲ್ ಸ್ಟಾರ್ಕ್(84 ರನ್)ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆತಿಥೇಯ ತಂಡವು 624 ರನ್ ಗಳಿಸಿತ್ತು. ಇನಿಂಗ್ಸ್ ಹಾಗೂ 18 ರನ್‌ನಿಂದ ಜಯ ಸಾಧಿಸಿತ್ತು.
1981ರಲ್ಲಿ ಆಸ್ಟ್ರೇಲಿಯ ತಂಡವು ಭಾರತದ ವಿರುದ್ಧ ಎಂಸಿಜಿಯಲ್ಲಿ ಕನಿಷ್ಠ ಸ್ಕೋರ್(83) ಗಳಿಸಿತ್ತು. ಆಗ ಆಸ್ಟ್ರೇಲಿಯದ ಮೂವರು ಬ್ಯಾಟರ್‌ಗಳು ಮಾತ್ರ ಎರಡಂಕೆಯನ್ನು ದಾಟಿದ್ದರು. ಕಪಿಲ್ ದೇವ್ 5 ವಿಕೆಟ್ ಗೊಂಚಲು ಪಡೆದರೆ, ಕಾರ್ಸನ್ ಘಾರ್ವಿ ಹಾಗೂ ದಿಲಿಪ್ ಜೋಶಿ ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದರು.