ಈ ವರ್ಷ ಗರಿಷ್ಠ ಅಂತರ್‌ರಾಷ್ಟ್ರೀಯ ರನ್ ಗಳಿಸಿದ ಸ್ಮೃತಿ ಮಂಧಾನ
ವಡೋದರ: ಮಹಿಳೆಯರ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 91 ರನ್ ಗಳಿಸಿರುವ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಮತ್ತೊಮ್ಮೆ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಅಂತರ್‌ರಾಷ್ಟ್ರೀಯ ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ರವಿವಾರ ನಡೆದ ಪಂದ್ಯದಲ್ಲಿ 102 ಎಸೆತಗಳಲ್ಲಿ 91 ರನ್ ಗಳಿಸಿದ ಸ್ಮೃತಿ ಅವರು 2024ರ ಕ್ಯಾಲೆಂಡರ್ ವರ್ಷದಲ್ಲಿ 1,602 ರನ್ ಗಳಿಸಿದರು. ಈ ಮಹತ್ವದ ಸಾಧನೆಯ ಮೂಲಕ 28 ರ ಹರೆಯದ ಸ್ಮೃತಿ ಅವರು ದಕ್ಷಿಣ ಆಫ್ರಿಕಾದ ಲೌರಾ ವಾಲ್ವಾರ್ಟ್ ದಾಖಲೆಯನ್ನು ಮುರಿದರು. ವಾಲ್ವಾರ್ಟ್ 1,593 ರನ್ ಗಳಿಸಿದ್ದಾರೆ. ಸ್ಮೃತಿ ಎರಡನೇ ಬಾರಿ ಈ ದಾಖಲೆ ನಿರ್ಮಿಸಿದ್ದು, 2018ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು.
ಆರಂಭಿಕ ಆಟಗಾರ್ತಿ ಸ್ಮೃತಿ 2024ರ ಕ್ಯಾಲೆಂಡರ್ ವರ್ಷದಲ್ಲಿ ಮಹಿಳೆಯರ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಒಟ್ಟು 763 ರನ್ ಗಳಿಸಿದ್ದಾರೆ.
ಎಡಗೈ ಬ್ಯಾಟರ್ ಸ್ಮೃತಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಭಾರತ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಿದೆ.
5 ಇನಿಂಗ್ಸ್‌ಗಳಲ್ಲಿ ಐದನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿರುವ ಸ್ಮೃತಿ ಅವರು ಚೊಚ್ಚಲ ಪಂದ್ಯವನ್ನಾಡಿದ ಪ್ರತಿಕಾ ರಾವಲ್(40 ರನ್, 69 ಎಸೆತ)ಅವರೊಂದಿಗೆ ಮೊದಲ ವಿಕೆಟ್‌ನಲ್ಲಿ 110 ರನ್ ಜೊತೆಯಾಟ ನಡೆಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್(34 ರನ್), ಹರ್ಲೀನ್ ದೆವೊಲ್(44 ರನ್), ರಿಚಾ ಘೋಷ್(26 ರನ್)ಹಾಗೂ ಜೆಮಿಮಾ ರೋಡ್ರಿಗಸ್(31 ರನ್)ಭಾರತ ತಂಡವು 300ಕ್ಕೂ ಅಧಿಕ ರನ್ ಗಳಿಸಲು ನೆರವಾದರು.
ಗೆಲ್ಲಲು ಕಠಿಣ ಗುರಿ ಪಡೆದ ವಿಂಡೀಸ್ ತಂಡ 26.2 ಓವರ್‌ಗಳಲ್ಲ ಕೇವಲ 103 ರನ್‌ಗೆ ಆಲೌಟಾಗಿ 211 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಐದು ವಿಕೆಟ್ ಗೊಂಚಲು(5-29) ಪಡೆದ ರೇಣುಕಾ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.