ಮೆಲ್ಬರ್ನ್ ಟೆಸ್ಟ್: ಕಠಣ ಅಭ್ಯಾಸ ನಡೆಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಮೆಲ್ಬರ್ನ್: ಭಾರತೀಯ ಕ್ರಿಕೆಟ್ ಆಟಗಾರರು ಶನಿವಾರ ಬೆಳಗ್ಗೆ ಮುಂಬರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸಿದರು.
ಸೂರ್ಯನ ಬಿಸಿಲಿನ ಶಾಖವಿದ್ದರೂ ವಾತಾವರಣ ತಂಪಾಗಿತ್ತು. ಕಿಸ್ಮಸ್ ಮರುದಿನ ಡಿ.26ರಂದು ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ಆಟಗಾರರು ಅಲ್ಪ ಅವಧಿಯ ವಿಶ್ರಾಂತಿಗಾಗಿ ಚದುರಿಹೋಗಿದ್ದರೆ, ಭಾರತೀಯ ಆಟಗಾರರು ಒಟ್ಟಿಗಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅವರು ನೆಟ್ನಲ್ಲಿ ತಮ್ಮ ಬ್ಯಾಟ್ ಅಭ್ಯಾಸ ನಡೆಸಿದರು. ಮುಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅವರು ವೇಗ, ಸ್ಪಿನ್ ಹಾಗೂ ಥ್ರೋಡೌನ್ಸ್ನಲ್ಲಿ ಹೆಚ್ಚು ಬೆವರಿಳಿಸಿದರು.
ಆರ್.ಅಶ್ವಿನ್ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ದೇವದತ್ತ ಪಡಿಕ್ಕಲ್ ಆಫ್ ಸ್ಪಿನ್ನರ್ ಆಗಿ ಹೆಚ್ಚುವರಿ ಕಾರ್ಯನಿರ್ವಹಿಸಿ ವಾಶಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಗೆ ಸಾಥ್ ನೀಡಿದರು. ಆ ನಂತರ ಸರ್ಫರಾಝ್ ಖಾನ್ ಜೊತೆ ಪಡಿಕ್ಕಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ವೇಗಿಗಳ ಪೈಕಿ ಜಸ್ಪ್ರಿತ್ ಬುಮ್ರಾ ಅವರು ಜಿಮ್ನಿಂದ ದೂರ ಉಳಿದರು. ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಕೂಡ ಬೌಲಿಂಗ್ ಮಾಡಿದರು.
ಭಾರತೀಯ ಆಟಗಾರರು ಮೈದಾನದೊಳಗೆ ಮೂರು ಗಂಟೆಗಳ ಕಾಲ ಬೆವರಿಳಿಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿವೆ.
ಭಾರತೀಯ ತಂಡವು ಸೋಮವಾರ ವಿಶ್ರಾಂತಿ ಪಡೆಯುವ ಮೊದಲು ರವಿವಾರ ಮತ್ತೊಮ್ಮೆ ತರಬೇತಿಯಲ್ಲಿ ಭಾಗವಹಿಸಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಕೆಲವೇ ಜನರು ಬೆಳಗ್ಗಿನ ಜಾಗಿಂಗ್ ಹಾಗೂ ನಡಿಗೆಯಲ್ಲಿ ಭಾಗವಹಿಸಿದ್ದಾರೆ. ಕೆಲವು ಭಾರತೀಯ ಕ್ರಿಕೆಟ್ ಪ್ರೇಮಿಗಳು ತನ್ನ ನೆಚ್ಚಿನ ಸೂಪರ್ಸ್ಟಾರ್ಗಳು ಅಭ್ಯಾಸ ಮಾಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾದರು.
ರೋಹಿತ್ ಹಾಗೂ ವಿರಾಟ್ ನೆಟ್ ಪ್ರಾಕ್ಟೀಸ್ ಮಾಡುವಾಗ ಕ್ರಿಕೆಟ್ ಅಭಿಮಾನಿಗಳು ಸುಮ್ಮನೆ ನಿಂತು ನೋಡಿದರು. ಅಡಿಲೇಡ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಕ್ರಿಕೆಟ್ ಪ್ರೇಮಿಗಳು ಗದ್ದಲ ಎಬ್ಬಿಸಿದ್ದರು. ಭಾರತ ತಂಡವು ಅಭ್ಯಾಸ ಮಾಡುವಾಗ ಕ್ರಿಕೆಟ್ ಅಭಿಮಾನಿಗಳ ಆಗಮನಕ್ಕೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿತ್ತು.
ಮೆಲ್ಬರ್ನ್ ಹವಾಮಾನ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತೀಯ ಆಟಗಾರರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಪ್ರಸಕ್ತ ಸರಣಿಯಲ್ಲಿ ರೋಹಿತ್ ಬ್ಯಾಟ್ನಿಂದ ರನ್ ಬಂದಿಲ್ಲ. ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಸರಣಿಯಲ್ಲಿ ಭಾರತದ ಯಶಸ್ವಿ ಬ್ಯಾಟರ್ ಆಗಿರುವ ಕೆ.ಎಲ್.ರಾಹುಲ್ ಇನಿಂಗ್ಸ್ ಆರಂಭಿಸಲು ಅನುವು ಮಾಡಿಕೊಡಲು ರೋಹಿತ್ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಆ ಕ್ರಮಾಂಕದಲ್ಲಿ ಯಶಸ್ಸು ಕಂಡಿಲ್ಲ. ಆಸ್ಟ್ರೇಲಿಯಕ್ಕೆ ಆಗಮಿಸಿದ ನಂತರ ರೋಹಿತ್ ಅವರು ಅಭ್ಯಾಸ ಪಂದ್ಯ, ಹಗಲು-ರಾತ್ರಿ ಪಂದ್ಯದಲ್ಲಿ ಗಮನ ಸೆಳೆಯಲಿಲ್ಲ. ಮಳೆಬಾಧಿತ ಗಾಬಾ ಟೆಸ್ಟ್ ಪಂದ್ಯದಲ್ಲೂ ದೊಡ್ಡ ಕೊಡುಗೆ ನೀಡಿರಲಿಲ್ಲ. 4 ಇನಿಂಗ್ಸ್ಗಳಲ್ಲಿ ಮೂರು ಬಾರಿ ಒಂದಂಕಿ ಸ್ಕೋರ್ ಗಳಿಸಿದ್ದರು. ಎಂಸಿಜಿ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.
ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ನಂತರ ರೋಹಿತ್ ಬ್ಯಾಟ್ನಿಂದ ರನ್ ಹರಿದು ಬಂದಿಲ್ಲ. ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸುಮಾರು 1 ಲಕ್ಷ ಪ್ರೇಕ್ಷಕರ ಸಮ್ಮುಖದಲ್ಲಿ ತನ್ನ ಮೊದಲಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಬಲಗೈ ಬ್ಯಾಟರ್ ರೋಹಿತ್ ಮಧ್ಯಮ ಸರದಿಯಲ್ಲೇ ಮುಂದುವರಿಸುವ ಸಾಧ್ಯತೆಯಿದ್ದು, ಅಭ್ಯಾಸದ ವೇಳೆ ಸ್ಪಿನ್ ಬೌಲಿಂಗ್ ಎದುರಿಸಿದರು. ವಾಶಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಬೌಲಿಂಗ್ ಮಾಡಿದರು.