4ನೇ ಟೆಸ್ಟ್ | ಸಚಿನ್ ತೆಂಡುಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು
ಹೊಸದಿಲ್ಲಿ: ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಸದ್ಯ ಕಳಪೆ ಫಾರ್ಮ್ನಲ್ಲಿದ್ದರೂ ಡಿಸೆಂಬರ್ 26ರಿಂದ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ಹಾಗೂ ಭಾರತ ನಡುವಿನ 4ನೇ ಟೆಸ್ಟ್ ಪಂದ್ಯದ ವೇಳೆ ಎಲ್ಲರ ಕಣ್ಣು ಅವರ ಮೇಲಿದೆ.
ಪ್ರತಿಷ್ಠಿತ ಎಂಸಿಜಿಯಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಭಾರತದ ಟಾಪ್-ಸ್ಕೋರರ್ ಎನಿಸಿಕೊಂಡು ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ.
ಕೊಹ್ಲಿ ಅವರು ಎಂಸಿಜಿಯಲ್ಲಿ 52.57ರ ಸರಾಸರಿಯಲ್ಲಿ 3 ಟೆಸ್ಟ್ ಪಂದ್ಯಗಳಲ್ಲಿ(6 ಇನಿಂಗ್ಸ್)316 ರನ್ ಗಳಿಸಿದ್ದಾರೆ. ತೆಂಡುಲ್ಕರ್ ದಾಖಲೆ(449 ರನ್)ಹಿಂದಿಕ್ಕಲು ಕೇವಲ 133 ರನ್ ಅಗತ್ಯವಿದೆ.
ಮೆಲ್ಬರ್ನ್ನಲ್ಲಿ ಗರಿಷ್ಠ ರನ್ ಗಳಿಸಿರುವ ಭಾರತದ ಆಟಗಾರರ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಕೊಹ್ಲಿ ಅವರಿಗೆ ಅಗ್ರ ಸ್ಥಾನಕ್ಕೇರುವ ಸುವರ್ಣಾವಕಾಶವಿದೆ.
ತೆಂಡುಲ್ಕರ್ ಅವರು ಎಂಸಿಜಿಯಲ್ಲಿ 44.90ರ ಸರಾಸರಿಯಲ್ಲಿ ಒಂದು ಶತಕ ಹಾಗೂ 3 ಅರ್ಧಶತಕಗಳ ಸಹಿತ 5 ಟೆಸ್ಟ್ ಪಂದ್ಯಗಳಲ್ಲಿ 449 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.
ಅಜಿಂಕ್ಯ ರಹಾನೆ 3 ಟೆಸ್ಟ್ ಪಂದ್ಯಗಳಲ್ಲಿ 73.80ರ ಸರಾಸರಿಯಲ್ಲಿ ಒಟ್ಟು 369 ರನ್ ಗಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕೇವಲ 2 ಟೆಸ್ಟ್ ಪಂದ್ಯಗಳಲ್ಲಿ 280 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು 3 ಟೆಸ್ಟ್ ಪಂದ್ಯಗಳಲ್ಲಿ 31.50ರ ಸರಾಸರಿಯಲ್ಲಿ ಕೇವಲ 126 ರನ್ ಗಳಿಸಿದ್ದು, ಐತಿಹಾಸಿಕ ಮೈದಾನ ಎಂಸಿಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಕಳಪೆ ಪ್ರದರ್ಶನದಿಂದ ಹೊರಬಂದು ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.
► ಎಂಸಿಜಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಬ್ಯಾಟರ್ಗಳು
ಸಚಿನ್ ತೆಂಡುಲ್ಕರ್: 5 ಟೆಸ್ಟ್ ಪಂದ್ಯಗಳಲ್ಲಿ 449 ರನ್
ಅಜಿಂಕ್ಯ ರಹಾನೆ: 3 ಟೆಸ್ಟ್ ಪಂದ್ಯಗಳಲ್ಲಿ 369 ರನ್
ವಿರಾಟ್ ಕೊಹ್ಲಿ: 3 ಟೆಸ್ಟ್ ಪಂದ್ಯಗಳಲ್ಲಿ 316 ರನ್
ವೀರೇಂದ್ರ ಸೆಹ್ವಾಗ್: 2 ಟೆಸ್ಟ್ ಪಂದ್ಯಗಳಲ್ಲಿ 280 ರನ್
ರಾಹುಲ್ ದ್ರಾವಿಡ್: 4 ಟೆಸ್ಟ್ ಪಂದ್ಯಗಳಲ್ಲಿ 263 ರನ್