ನೂತನ ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆಗೆ ಜ. 12ರಂದು ಬಿಸಿಸಿಐ ವಿಶೇಷ ಮಹಾಸಭೆ
ಮುಂಬೈ, ಡಿ. 20: ತನ್ನ ನೂತನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯನ್ನು ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಜನವರಿ 12ರಂದು ಮುಂಬೈಯಲ್ಲಿ ವಿಶೇಷ ಮಹಾಸಭೆಯೊಂದನ್ನು ಕರೆದಿದೆ. ಮಾಜಿ ಕಾರ್ಯದರ್ಶಿ ಜಯ ಶಾ ಮತ್ತು ಮಾಜಿ ಕೋಶಾಧಿಕಾರಿ ಆಶಿಶ್ ಶೇಲರ್ ಈ ತಿಂಗಳ ಆದಿ ಭಾಗದಲ್ಲಿ ಈ ಸ್ಥಾನಗಳನ್ನು ತೆರವುಗೊಳಿಸಿದ್ದಾರೆ.
ಖಾಲಿ ಬಿದ್ದಿರುವ ಯಾವುದೇ ಹುದ್ದೆಯನ್ನು ವಿಶೇಷ ಮಹಾಸಭೆಯನ್ನು ಕರೆದು 45 ದಿನಗಳೊಳಗೆ ತುಂಬಬೇಕು ಎಂದು ಬಿಸಿಸಿಐ ಸಂವಿಧಾನ ಹೇಳುತ್ತದೆ. ಹುದ್ದೆಗಳು ತೆರವುಗೊಂಡ 43 ದಿನಗಳಲ್ಲಿ ಪ್ರಸ್ತಾವಿತ ಮಹಾಸಭೆ ನಡೆಯಲಿದೆ.
‘‘ಗುರುವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯ ಬಳಿಕ, ವಿಶೇಷ ಮಹಾಸಭೆಯ ಬಗ್ಗೆ ರಾಜ್ಯ ಘಟಕಗಳಿಗೆ ಸೂಚನೆ ಕಳುಹಿಸಲಾಗಿದೆ. ಆ ಮಹಾಸಭೆಯು ಮುಂಬೈಯಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಜನವರಿ 12ರಂದು ನಡೆಯಲಿದೆ’’ ಎಂದು ರಾಜ್ಯವೊಂದರ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರು ಪಿಟಿಐಗೆ ತಿಳಿಸಿದರು.
ಜಯ ಶಾ ಡಿಸೆಂಬರ್ ಒಂದರಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈವರೆಗಿನ ಅತ್ಯಂತ ಕಿರಿಯ ಐಸಿಸಿ ಅಧ್ಯಕ್ಷರಾಗಿದ್ದಾರೆ. ಅದೇ ವೇಳೆ, ಬಿಜೆಪಿ ಪಕ್ಷದ ಅನುಭವಿ ರಾಜಕಾರಣಿಯಾಗಿರುವ ಶೇಲರ್ ಮಹಾರಾಷ್ಟ್ರದ ನೂತನ ಸರಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಒಬ್ಬ ವ್ಯಕ್ತಿಯು ಎರಡು ಹುದ್ದೆಗಳನ್ನು ವಹಿಸಿಕೊಳ್ಳುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ಲೋಧಾ ಸಮಿತಿಯ ವರದಿ ಹೇಳುತ್ತದೆ.
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿದ್ದ ವೇಳೆ ಶೇಲರ್ ಬಿಸಿಸಿಐ ಕೋಶಾಧಿಕಾರಿಯಾಗಿದ್ದರು. ಆದರೆ, ಯಾವುದೇ ಸಚಿವರು ಅಥವಾ ಸಾರ್ವಜನಿಕ ಸೇವಕರು ಬಿಸಿಸಿಐ ಪದಾಧಿಕಾರಿಯಾಗುವಂತಿಲ್ಲ ಎಂಬುದಾಗಿ ಲೋಧಾ ಸಮಿತಿಯ ಶಿಫಾರಸುಗಳು ಹೇಳುವುದರಿಂದ, ಸಚಿವರಾದ ಬಳಿಕ ಶೇಲರ್ ಬಿಸಿಸಿಐಯ ತನ್ನ ಸ್ಥಾನವನ್ನು ತೊರೆದಿದ್ದಾರೆ.