ದಿಢೀರ್ ನಿವೃತ್ತಿ ಕುರಿತ ತಂದೆ ಹೇಳಿಕೆ ಬಗ್ಗೆ ಮೌನ ಮುರಿದ ಅಶ್ವಿನ್
ಮುಂಬೈ: ಸಕ್ರಿಯವಾಗಿರುವ ಬೌಲರ್ ಗಳ ಪೈಕಿ ಅತಿಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿರುವ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ದಿಢೀರ್ ನಿವೃತ್ತಿ ಘೋಷಣೆಗೆ ಅವರನ್ನು ನಿರಂತರವಾಗಿ ಅವಮಾನಿಸುತ್ತಿರುವುದೂ ಒಂದು ಕಾರಣ ಎಂದು ತಂದೆ ರವಿಚಂದ್ರನ್ ನೀಡಿರುವ ಹೇಳಿಕೆ ಬಗ್ಗೆ ಅಶ್ವಿನ್ ಕೊನೆಗೂ ಮೌನ ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 537 ವಿಕೆಟ್ ಪಡೆದ ದಾಖಲೆ ಹೊಂದಿರುವ ಅಶ್ವಿನ್, ಆಸ್ಟ್ರೇಲಿಯಾ ಪ್ರವಾಸದ ಮಧ್ಯೆ ಬ್ರಿಸ್ಬೇನ್ ಟೆಸ್ಟ್ ನ ಕೊನೆಯಲ್ಲಿ ದಿಢೀರ್ ನಿವೃತ್ತಿ ಘೋಷಿಸಿದ್ದರು. ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅಶ್ವಿನ್ ಆಡುವ ಅವಕಾಶ ಪಡೆದಿದ್ದರು.
"ನಿಶ್ಚಿತವಾಗಿ, ಕುಟುಂಬದ ಭಾವನೆಗಳ ಬಗ್ಗೆ ಯಾವ ಸಂದೇಹವೂ ಇಲ್ಲ. ಏಕೆಂದರೆ ಆತ 14-15 ವರ್ಷದಿಂದ ಆಡುತ್ತಿದ್ದಾನೆ. ದಿಢೀರ್ ಬದಲಾವಣೆಗಳುಮತ್ತು ನಿವೃತ್ತಿ ನಿಜವಾಗಿಯೂ ಆಘಾತಕಾರಿ. ಇದೇ ವೇಳೆ ನಿರಂತರವಾಗಿ ನಡೆಯುತ್ತಿರುವ ಅವಮಾನವೂ ಇದಕ್ಕೆ ಕಾರಣ ಎನ್ನುವ ಅನಿಸಿಕೆ ನಮ್ಮದು. ಇಂಥದ್ದನ್ನು ಎಷ್ಟು ಸಮಯ ಸಹಿಸಿಕೊಂಡು ಇರಲು ಸಾಧ್ಯ" ಎಂದು ರವಿಚಂದ್ರನ್ ನ್ಯೂಸ್ 18 ಜತೆ ಮಾತನಾಡುವ ವೇಳೆ ಹೇಳಿದ್ದರು.
ಈ ಬಗ್ಗೆ ಮೌನ ಮುರಿದಿರುವ ಅಶ್ವಿನ್, "ಮಾಧ್ಯಮಗಳ ಜತೆ ಮಾತನಾಡುವ ಬಗ್ಗೆ ತಂದೆಗೆ ತರಬೇತಿ ಇಲ್ಲ. ತಂದೆಯ ಹೇಳಿಕೆಗಳ ಸಂಪ್ರದಾಯವನ್ನು ನೀವು ಅನುಸರಿಸುತ್ತೀರಿ ಎಂದು ನನಗೆ ಅನಿಸುವುದಿಲ್ಲ. ಅವರನ್ನು ಕ್ಷಮಿಸಿ " ಎಂದು ಅಶ್ವಿನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.