ವಿರಾಟ್ ಕೊಹ್ಲಿ ವಾಸ್ತವ್ಯ ಶೀಘ್ರವೇ ಬ್ರಿಟನ್‌ಗೆ ಸ್ಥಳಾಂತರ?

Update: 2024-12-20 16:33 GMT

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ | PC : X 

ಮುಂಬೈ: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ಹೆಚ್ಚಿನ ಸಮಯವನ್ನು ಬ್ರಿಟನ್‌ನಲ್ಲಿ ಕಳೆಯುತ್ತಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಈಗ ಅವರು ತನ್ನ ನೆಲೆಯನ್ನು ಶಾಶ್ವತವಾಗಿ ಬ್ರಿಟನ್‌ಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ತನ್ನ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಬ್ರಿಟನ್‌ನಲ್ಲೇ ವಾಸ್ತವ್ಯ ಹೂಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.    

ಈ ಬಗ್ಗೆ ಹೆಚ್ಚಿನ ವಿವರಗಳು ಲಭಿಸಿಲ್ಲವಾದರೂ, ವಿಶೇಷವಾಗಿ ಅನುಷ್ಕಾ ಎರಡನೇ ಮಗುವಿನ ಗರ್ಭಿಣಿಯಾದಂದಿನಿಂದ ಕೊಹ್ಲಿ ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಲಂಡನ್‌ನಲ್ಲೇ ಕಳೆಯುತ್ತಿದ್ದಾರೆ.

ಲಂಡನ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ಮನೆಯೊಂದನ್ನು ಹೊಂದಿದ್ದಾರೆ. ಎರಡನೇ ಮಗುವಿನ ಜನನದ ಬಳಿಕ, ಅವರು ತಮ್ಮ ಹೆಚ್ಚಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದಾರೆ. ಅವರು ಶಾಶ್ವತವಾಗಿ ಬ್ರಿಟನ್‌ಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.

‘‘ಹೌದು, ವಿರಾಟ್ ತನ್ನ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್‌ನಲ್ಲಿ ವಾಸಿಸುವ ಯೋಜನೆಯನ್ನು ಹೊಂದಿದ್ದಾರೆ. ಅವರು ಅತ್ಯಂತ ಶೀಘ್ರದಲ್ಲಿ ಭಾರತವನ್ನು ತೊರೆಯಲಿದ್ದಾರೆ. ಆದರೆ, ಸದ್ಯಕ್ಕೆ ಕೊಹ್ಲಿ ಕ್ರಿಕೆಟ್ ಹೊರತುಪಡಿಸಿ, ತನ್ನ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ’’ ಎಂದು ರಾಜ್‌ಕುಮಾರ್ ಶರ್ಮಾ ಹೇಳಿರುವುದಾಗಿ ‘ದೈನಿಕ್ ಜಾಗರಣ್’ ವರದಿ ಮಾಡಿದೆ.

36 ವರ್ಷದ ಕೊಹ್ಲಿ ಈಗಾಗಲೇ ಅಂತರ್‌ರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿ ಹೊಂದಿದ್ದಾರೆ. ಅವರು ಟೆಸ್ಟ್‌ಗಳು ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಪರವಾಗಿ ಎಷ್ಟು ಸಮಯ ಆಡಲಿದ್ದಾರೆ ಎನ್ನುವುದು ಗೊತ್ತಿಲ್ಲ. ಇತ್ತೀಚೆಗೆ ಅವರ ಫಾರ್ಮ್ ಆಶಾದಾಯಕವಾಗಿಯೇನೂ ಇಲ್ಲ. ಹಾಗಾಗಿ, ಭಾರತೀಯ ತಂಡದಲ್ಲಿ ಕೊಹ್ಲಿಯ ಭವಿಷ್ಯದ ಬಗ್ಗೆ ಅವರ ಅಭಿಮಾನಿಗಳು ಮತ್ತು ಪರಿಣತರು ಚರ್ಚೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News