ಅಂಡರ್ 19 ಮಹಿಳಾ ಏಶ್ಯಕಪ್: ಬಾಂಗ್ಲಾದೇಶ ತಂಡವನ್ನು ಮಣಿಸಿ ಚಾಂಪಿಯನ್ ಆದ ಭಾರತ
ಕೌಲಾಲಂಪುರ್: ಇಲ್ಲಿ ನಡೆದ ಅಂಡರ್ 19 ಮಹಿಳಾ ಏಶ್ಯ ಕಪ್ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತೀಯ ವನಿತೆಯರು, ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ತಂಡವು 41 ರನ್ ಗಳ ಅಂತರದಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ತಂಡವು, ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು. ನಂತರ ಗುರಿಯ ಬೆನ್ನಿತ್ತಿದ ಬಾಂಗ್ಲಾದೇಶ ಮಹಿಳಾ ತಂಡವು, 18.3 ಓವರ್ ಗಳಲ್ಲಿ ಕೇವಲ 76 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು. ಭಾರತದ ಪರ ಆಯುಷಿ ಶುಕ್ಲಾ 3.3 ಓವರ್ ಗಳಲ್ಲಿ 17 ರನ್ ನೀಡಿ, 3 ಪ್ರಮುಖ ವಿಕೆಟ್ ಕಿತ್ತರು. ಪರುಣಿಕ ಸಿಸೋಡಿಯ ಹಾಗೂ ಸೋನಮ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ವಿ.ಜೆ.ಜೋಶಿತಾ ಒಂದು ವಿಕೆಟ್ ಗಳಿಸಿದರು.
ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡದ ಪರ ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಶಾ 52 ರನ್ ಗಳಿಸಿದರು. ನಂತರ ಮಧ್ಯಮ ಕ್ರಮಾಂಕದ ಆಟಗಾರ್ತಿ ಮಿಥಿಲಾ ವಿನೋದ್ 17 ರನ್ ಗಳಿಸಿದ್ದು ಬಿಟ್ಟರೆ, ಉಳಿದವರಿಂದ ದೊಡ್ಡ ಮೊತ್ತದ ಕೊಡುಗೆ ಬರಲಿಲ್ಲ. ಬಾಂಗ್ಲಾದೇಶ ತಂಡದ ಪರ ಈಸ್ಮಿನ್ ನಾಲ್ಕು ವಿಕೆಟ್ ಪಡೆದರೆ, ನಿಶಿತಾ ಅಖ್ತರ್ ಎರಡು ವಿಕೆಟ್ ಗಳಿಸಿದರು.