ಖೇಲ್‌ರತ್ನ ನಾಮನಿರ್ದೇಶನ ಪಟ್ಟಿಯಲ್ಲಿಲ್ಲ ಶೂಟರ್ ಮನು ಭಾಕರ್ ಹೆಸರು!
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸಿದ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರ ಹೆಸರು ಭಾರತದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಇಲ್ಲದೆ ಇರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ ಎಂದು Times of India ಪತ್ರಿಕೆಗೆ ಮೂಲಗಳು ತಿಳಿಸಿವೆ.
ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ(ಎನ್‌ಆರ್‌ಎಐ)ಆಗಲಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವಿ.ರಾಮಸುಬ್ರಮಣಿಯನ್ ನೇತೃತ್ವದ 12 ಸದಸ್ಯರ ಆಯ್ಕೆ ಸಮಿತಿಯು ಹೆಸರುಗಳನ್ನು ಶಿಫಾರಸು ಮಾಡಿದೆ.
ಅರ್ಜಿ ಸಲ್ಲಿಸುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ. ಭಾಕರ್ ಹೆಸರು ಇಲ್ಲದ್ದನ್ನು ಗಮನಿಸಿದ ನಂತರ ನಾವು ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿದ್ದೇವೆ. ಖೇಲ್‌ರತ್ನಕ್ಕೆ ಅವರ ಹೆಸರನ್ನು ಸೇರಿಸಲು ಮನವಿ ಮಾಡಿದ್ದೇವೆ ಎಂದು ಎನ್‌ಆರ್‌ಎಐ ಅಧ್ಯಕ್ಷ ಕಾಳಿಕೇಶ್ ನಾರಾಯಣ ಸಿಂಗ್ ಹೇಳಿದ್ದಾರೆ.
ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಹಾಗೂ ಪ್ಯಾರಾ ಹೈಜಂಪರ್ ಪ್ರವೀಣ್ ಕುಮಾರ್ ಹೆಸರನ್ನು ಖೇಲ್‌ರತ್ನಕ್ಕೆ ಶಿಫಾರಸು ಮಾಡಲಾಗಿದೆ. ಹರ್ಮನ್‌ಪ್ರೀತ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಭಾರತ ತಂಡದ ನಾಯಕತ್ವವಹಿಸಿದ್ದರು. ಪ್ರವೀಣ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ನೂತನ ಏಶ್ಯ ದಾಖಲೆಯೊಂದಿಗೆ ಟಿ 64 ಕ್ಲಾಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಒಂದೇ ಆವೃತ್ತಿಯ ಒಲಿಂಪಿಕ್ಸ್(ಪ್ಯಾರಿಸ್)ನಲ್ಲಿ ಎರಡು ಪದಕಗಳನ್ನು ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿದ್ದ ಮನು ಇತಿಹಾಸವನ್ನು ರಚಿಸಿದ್ದರು. ಒಲಿಂಪಿಕ್ಸ್ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದರು.
ಮನು ಈ ವರ್ಷ ನಡೆದ ಪ್ಯಾರಿಸ್ ಗೇಮ್ಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ 10 ಮೀ. ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಜಯಿಸಿದ್ದರು.
ನಾವು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆವು. ನಮಗೆ ಉತ್ತರ ಬರಲಿಲ್ಲ: ಭಾಕರ್ ತಂದೆ ರಾಮ್ ಕಿಶನ್
ಮನು ಭಾಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂಬ ಕ್ರೀಡಾ ಸಚಿವಾಲಯದ ಹೇಳಿಕೆಯನ್ನು ಅಲ್ಲಗಳೆದ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್, ನಾವು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಆಯ್ಕೆ ಸಮಿತಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.
ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಏನು ಪ್ರಯೋಜನ? ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕೇ? ಒಬ್ಬ ಸರಕಾರಿ ಅಧಿಕಾರಿ ಎಲ್ಲವನ್ನು ನಿರ್ಧರಿಸುತ್ತಾರೆ. ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ನೀಡದೆ ಮೌನವಾಗುತ್ತಾರೆ. ನನಗಿದು ಅರ್ಥವಾಗುತ್ತಿಲ್ಲ. ನೀವು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ರೀತಿ ಇದೇನಾ ಎಂದು ರಾಮಕೃಷ್ಣ ಪ್ರಶ್ನಿಸಿದರು.