ಚಾಂಪಿಯನ್ಸ್ ಟ್ರೋಫಿ: ಫೆ. 23ಕ್ಕೆ ಯುಎಇಯಲ್ಲಿ ಭಾರತ-ಪಾಕ್ ಹಣಾಹಣಿ

Update: 2024-12-23 04:07 GMT

ಹೊಸದಿಲ್ಲಿ: ಹೈಬ್ರೀಡ್ ಮಾದರಿಯಲ್ಲಿ ನಡೆಯುವ 2025ರ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಲಿರುವ ಪಾಕಿಸ್ತಾನ, ತನ್ನ ಭಾರತ ವಿರುದ್ಧದ ಪಂದ್ಯಗಳಿಗೆ ತಟಸ್ಥ ತಾಣಗಳನ್ನು ಆಯ್ಕೆ ಮಾಡಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದೆ. ಈ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿವೆ ಎಂದು ಕ್ರಿಕ್ಬುಝ್ ವರದಿ ಮಾಡಿದೆ.

"ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯುಎಇಯನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದು, ಅಧಿಕೃತವಾಗಿ ಈ ಬಗ್ಗೆ ಐಸಿಸಿಗೆ ತನ್ನ ನಿರ್ಧಾರವನ್ನು ತಿಳಿಸಿದೆ. ಇದೀಗ ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ" ಎಂದು ಪಿಸಿಬಿ ವಕ್ತಾರರು ಹೇಳಿದ್ದಾಗಿ ವರದಿ ವಿವರಿಸಿದೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶೇಖ್ ಮುಬಾರಕ್ ಅಲ್ ನಹ್ಯಾನ್ ಅವರು ಈ ನಿರ್ಧಾರವನ್ನು ಅಂತಿಮಪಡಿಸಿದ್ದಾರೆ. ಐಸಿಸಿ ಮಂಡಳಿಯ ನಿಯಮಾವಳಿ ಅನುಸಾರ ಜಾಗತಿಕ ಟೂರ್ನಿಗಳಲ್ಲಿ ಆತಿಥ್ಯ ವಹಿಸುವ ದೇಶದ ಮಂಡಳಿ ತಟಸ್ಥ ತಾಣಗಳನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತದೆ. ಇದರಿಂದಾಗಿ ಭಾರತದ ವಿರುದ್ಧದ ಪಂದ್ಯಗಳಿಗೆ ದುಬೈ ತಾಣವಾಗಿರುತ್ತದೆ. ಪ್ರೇಕ್ಷಕರ ಬಹುನಿರೀಕ್ಷಿತ ಪಾಕಿಸ್ತಾನ ವಿರುದ್ಧದ ಪಂದ್ಯ ಫೆಬ್ರವರಿ 23ರಂದು ನಡೆಯಲಿದೆ.

ಯುಎಇ ಅಬುದಾಭಿ ಮತ್ತು ಶಾರ್ಜಾದಲ್ಲೂ ಎರಡು ಸ್ಟೇಡಿಯಂಗಳಿದ್ದು, ದುಬೈ ಸ್ಟೇಡಿಯಂ ಅತಿದೊಡ್ಡ ಕ್ರೀಡಾಂಗಣವಾಗಿದೆ. ಯುಎಇ ಬದಲಾಗಿ ಶ್ರೀಲಂಕಾವನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡುವ ಸಾಧ್ಯತೆಯನ್ನು ಪಿಸಿಬಿ ತಳ್ಳಿಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News