ಬಾಕ್ಸಿಂಗ್ ಡೇ ಟೆಸ್ಟ್: ಭಾರತ-ಅಸ್ಟ್ರೇಲಿಯಕ್ಕೆ ಮಾಡು-ಮಡಿ ಪಂದ್ಯ
ಮೆಲ್ಬರ್ನ್: ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ-ಆಸ್ಟ್ರೇಲಿಯ ತಂಡಗಳ ಮಧ್ಯೆ ನಡೆಯುತ್ತಿರುವ 5 ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿದೆ. ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಪಂದ್ಯ ಎಂದೇ ಕರೆಯಲ್ಪಡುವ ಮೂರನೇ ಟೆಸ್ಟ್ ಡಿ.26ರಿಂದ ಆರಂಭವಾಗಲಿದೆ. ಸಿಡ್ನಿಯಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಪಂದ್ಯಕ್ಕಿಂತ ಮೊದಲು ಉಭಯ ತಂಡಗಳು ಲಾಭ ಪಡೆಯಲು ಎದುರು ನೋಡುತ್ತಿವೆ.
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಬಾಕ್ಸಿಂಗ್ ಡೇ ಪಂದ್ಯವು ಹೆಚ್ಚು ಪ್ರಾಮುಖ್ಯ ಪಡೆದಿದೆ. ಇಲ್ಲಿ ಗೆಲುವು ಸಾಧಿಸಿದರೆ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ದಿಟ್ಟ ಹೆಜ್ಜೆ ಇಡಬಹುದು.
ಭಾರತಕ್ಕೆ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಆಡಿರುವ ಅನುಭವವಿದೆ. 2020ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಎಂಸಿಜಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಿತ್ತು. ಕೋವಿಡ್-19 ಬಾಧಿತ ಸರಣಿಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭಾರತ ತಂಡವು 8 ವಿಕೆಟ್‌ಗಳ ಜಯ ಸಂಪಾದಿಸಿತ್ತು.
ಭಾರತ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆರಂಭಿಕ 7 ಪಂದ್ಯಗಳಲ್ಲಿ 5ರಲ್ಲಿ ಜಯ ಹಾಗೂ 2ರಲ್ಲಿ ಡ್ರಾ ಸಾಧಿಸಿದೆ. ಆದರೆ ಆಸ್ಟ್ರೇಲಿಯ ತಂಡವು ಭಾರತ ವಿರುದ್ಧ 2018 ಹಾಗೂ 2020ರಲ್ಲಿ ಆಡಿರುವ ಹಿಂದಿನ 2 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಸೋತಿದೆ.
ಆಸ್ಟ್ರೇಲಿಯ ಹಾಗೂ ಭಾರತ ನಡುವಿನ ಒಟ್ಟು ಹೆಡ್-ಟು-ಹೆಡ್ ದಾಖಲೆಯಲ್ಲಿ ಆಸೀಸ್ ತಂಡವು 46ರಲ್ಲಿ ಜಯ ಸಾಧಿಸಿದರೆ, ಭಾರತ 33ರಲ್ಲಿ ಗೆಲುವು ದಾಖಲಿಸಿದೆ. 30 ಪಂದ್ಯಗಳು ಡ್ರಾ ಹಾಗೂ ಒಂದು ಪಂದ್ಯ ಟೈ ಆಗಿದೆ.
ಆಸ್ಟ್ರೇಲಿಯ ನೆಲದಲ್ಲಿ ಹೆಡ್-ಟು-ಹೆಡ್ ದಾಖಲೆಯಲ್ಲಿ ಆಸ್ಟ್ರೇಲಿಯ 31ರಲ್ಲಿ ಗೆಲುವು ಪಡೆದರೆ, ಭಾರತ 10ರಲ್ಲಿ ಜಯ ಸಾಧಿಸಿದೆ. 14 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಹಿಂದಿನ 10 ವರ್ಷಗಳಲ್ಲಿ ಆಸ್ಟ್ರೇಲಿಯ 8 ಬಾರಿ ಜಯ ಗಳಿಸಿದೆ(ಸ್ವದೇಶದಲ್ಲಿ 5, ವಿದೇಶದಲ್ಲಿ 2, ತಟಸ್ಥ ತಾಣದಲ್ಲಿ 1). ಭಾರತ 9 ಸಲ ಗೆಲುವು ಪಡೆದಿದೆ(ಸ್ವದೇಶದಲ್ಲಿ 4, ವಿದೇಶದಲ್ಲಿ 5). ಈ ಅವಧಿಯಲ್ಲಿ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.
ಸಚಿನ್ ತೆಂಡುಲ್ಕರ್ ಗರಿಷ್ಠ ರನ್(3,630 ರನ್)ಗಳಿಸಿದ್ದಾರೆ. ಆನಂತರ ರಿಕಿ ಪಾಂಟಿಂಗ್(2,555), ವಿವಿಎಸ್ ಲಕ್ಷ್ಮಣ್(2,434), ವಿರಾಟ್ ಕೊಹ್ಲಿ(2,168) ಹಾಗೂ ಸ್ಟೀವ್ ಸ್ಮಿತ್(2,166 ರನ್)ಅವರಿದ್ದಾರೆ.
ಆಸ್ಟ್ರೇಲಿಯದಲ್ಲಿ ರಿಕಿ ಪಾಂಟಿಂಗ್ ಗರಿಷ್ಠ ರನ್(1,893)ಗಳಿಸಿದ್ದಾರೆ. ಆ ನಂತರ ಸಚಿನ್ ತೆಂಡುಲ್ಕರ್(1,809), ವಿರಾಟ್ ಕೊಹ್ಲಿ(,1478), ವಿವಿಎಸ್ ಲಕ್ಷ್ಮಣ್(1,236) ಹಾಗೂ ಸ್ಟೀವ್ ಸ್ಮಿತ್(1,206) ಅವರಿದ್ದಾರೆ.
ಒಟ್ಟಾರೆ ನಾಥನ್ ಲಿಯೊನ್ ಗರಿಷ್ಠ ವಿಕೆಟ್(124) ಗಳಿಸಿದ್ದಾರೆ. ಅನಂತರ ಆರ್.ಅಶ್ವಿನ್(115), ಅನಿಲ್ ಕುಂಬ್ಳೆ(111), ಹರ್ಭಜನ್ ಸಿಂಗ್(95)ಹಾಗೂ ರವೀಂದ್ರ ಜಡೇಜ(89) ಅವರಿದ್ದಾರೆ.
ಆಸ್ಟ್ರೇಲಿಯದಲ್ಲಿ ನಾಥನ್ ಲಿಯೊನ್ ಹೆಚ್ಚು ವಿಕೆಟ್(63)ಗಳನ್ನು ಪಡೆದಿದ್ದಾರೆ. ಜಸ್‌ಪ್ರಿತ್ ಬುಮ್ರಾ(53), ಕಪಿಲ್ ದೇವ್(51), ಪ್ಯಾಟ್ ಕಮಿನ್ಸ್(49), ಮಿಚೆಲ್ ಸ್ಟಾರ್ಕ್(49) ಹಾಗೂ ಅನಿಲ್ ಕುಂಬ್ಳೆ(49) ಆ ನಂತರದ ಸ್ಥಾನದಲ್ಲಿದ್ದಾರೆ.