ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಪಿ.ವಿ. ಸಿಂಧು, ಚಿರಾಗ್-ಸಾತ್ವಿಕ್ ಶುಭಾರಂಭ
ಹೊಸದಿಲ್ಲಿ : ಬಿಡಬ್ಲ್ಯುಎಫ್ ಸೂಪರ್ 750 ಟೂರ್ನಿ ಇಂಡಿಯಾ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಶುವೊ ಯುನ್ ಸಂಗ್ ವಿರುದ್ಧ ಜಯ ಸಾಧಿಸಿರುವ ಪಿ.ವಿ. ಸಿಂಧು ತನ್ನ 2025ರ ಬ್ಯಾಡ್ಮಿಂಟನ್ ಋತುವಿನಲ್ಲಿ ಶುಭಾರಂಭ ಮಾಡಿದರು.
ಮಂಗಳವಾರ ನಡೆದ ಪಂದ್ಯದಲ್ಲಿ 16ನೇ ರ‍್ಯಾಂಕಿನ ಸಿಂಧು ಅವರು 51 ನಿಮಿಷಗಳ ಹೋರಾಟದಲ್ಲಿ ವಿಶ್ವದ ನಂ.24ನೇ ಎದುರಾಳಿ ಸಂಗ್‌ರನ್ನು 21-14, 22-20 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದರು.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ಒಂದು ಹಂತದಲ್ಲಿ 17-19ರಿಂದ ಹಿನ್ನಡೆ ಅನುಭವಿಸಿದರು. 20-20ರಿಂದ ಸಮಬಲ ಸಾಧಿಸಿ ಚೇತರಿಸಿಕೊಂಡರು. ಅಂತಿಮವಾಗಿ 22-20 ಅಂತರದಿಂದ ಜಯಶಾಲಿಯಾದರು.
ಸಿಂಧು ಮುಂದಿನ ಸುತ್ತಿನಲ್ಲಿ ಜಪಾನ್‌ನ 46ನೇ ರ‍್ಯಾಂಕಿನ ಆಟಗಾರ್ತಿ ಮನಾಮಿ ಸುಝ್‌ರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲುವಿನ ವಿಶ್ವಾಸ ಮೂಡಿಸಿರುವ ವಿಶ್ವದ ನಂ.9ನೇ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೂಡ ಅಂತಿಮ 32ರ ಸುತ್ತಿನ ಪಂದ್ಯವನ್ನು ಗೆದ್ದುಕೊಂಡರು.
ಒಂದು ಗಂಟೆ, 16 ನಿಮಿಷಗಳ ಕಾಲ ನಡೆದ ಡಬಲ್ಸ್ ಪಂದ್ಯದಲ್ಲಿ 7ನೇ ಶ್ರೇಯಾಂಕದ ಸಾತ್ವಿಕ್ ಹಾಗೂ ಚಿರಾಗ್ ಮಲೇಶ್ಯದ ವಿಶ್ವದ ನಂ.14ನೇ ಜೋಡಿ ಮಾನ್ ವೀ ಚೋಂಗ್ ಹಾಗೂ ಟೀ ಕೈ ವುನ್‌ರನ್ನು 23-21, 19-21, 21-16 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಕಿರಣ್ ಜಾರ್ಜ್ ಕೂಡ ಅಂತಿಮ-16ರ ಸುತ್ತನ್ನು ಪ್ರವೇಶಿಸಿದ್ದಾರೆ.
ಜಪಾನಿನ ಯುಶಿ ಟನಕ ವಿರುದ್ಧ ಆಡಿರುವ ಕಿರಣ್ ಜಾರ್ಜ್ ಅವರು ಮೊದಲ ಸಿಂಗಲ್ಸ್ ಪಂದ್ಯದಲ್ಲಿ 21-19, 14-21, 27-25 ಅಂತರದಿಂದ ಜಯಶಾಲಿಯಾದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರು ಚೀನಾದ ವೆಂಗ್ ಹೊಂಗ್‌ಯಾಂಗ್ ವಿರುದ್ಧದ ಮೊದಲ ಸುತ್ತಿನ ಪಂದ್ಯಕ್ಕಿಂತ ಮೊದಲೇ ಸ್ಪರ್ಧೆಯಿಂದ ಹಿಂದೆ ಸರಿದರು. ಪರಿಣಾಮವಾಗಿ ಚೀನಾ ಆಟಗಾರ ಮುಂದಿನ ಸುತ್ತಿಗೆ ವಾಕ್ ಓವರ್ ಪಡೆದರು.
ಇದೇ ವೇಳೆ , ಐದನೇ ಶ್ರೇಯಾಂಕದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನಿನ ಅರಿಸಾ ಹಿಗಾಶಿನೊ ಹಾಗೂ ಅಯಾಕೊ ಸಕುರಾಮೊಟೊ ಎದುರು 21-23, 19-21 ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದರು.
ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಪ್ಯಾರಿಸ್ ಒಲಿಂಪಿಯನ್ ತನಿಶಾ ಕ್ರಾಸ್ಟೊ ಹಾಗೂ ಧ್ರುವ್ ಕಪಿಲಾ ಮುಂದಿನ ಸುತ್ತಿಗೆ ತಲುಪಿದರು. ಮೊದಲ ಗೇಮ್ 8-21ರಿಂದ ಸೋತಿರುವ ತನಿಶಾ-ಧ್ರುವ್ ಜೋಡಿ 2ನೇ ಹಾಗೂ 3ನೇ ಗೇಮ್ ಅನ್ನು 21-19, 21-17 ಅಂತರದಿಂದ ಗೆದ್ದುಕೊಂಡಿತು.