ರೋಹಿತ್- ಗಂಭೀರ್ ನಡುವೆ ಸಂಘರ್ಷ ಇಲ್ಲ: ಬಿಸಿಸಿಐ ಸ್ಪಷ್ಟನೆ

Update: 2025-01-14 02:21 GMT

PC: x.com/CricketNDTV

ಹೊಸದಿಲ್ಲಿ: ಭಾರತ ಕ್ರಿಕೆಟ್ ಆಯ್ಕೆ ಮಂಡಳಿ ಮುಖ್ಯಸ್ಥ ಅಜಿತ್ ಅಗರ್ಕರ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಆಂತರಿಕ ಸಂಘರ್ಷ ಏರ್ಪಟ್ಟಿದೆ ಎಂಬ ಮಾಧ್ಯಮ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದೆ.

ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ 1-3 ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಆಂತರಿಕ ಸಂಘರ್ಷದ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ನವದೆಹಲಿಯಲ್ಲಿ ಖೋ ಖೋ ವಿಶ್ವಕಪ್ ಉದ್ಘಾಟನಾ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಕುರಿತ ವರದಿಗಳನ್ನು ತಳ್ಳಿಹಾಕಿದರು.

"ಇದು ಸಂಪೂರ್ಣ ಸುಳ್ಳು. ಕೋಚ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರ ನಡುವೆ ಹಾಗೂ ಕೋಚ್ ಮತ್ತು ನಾಯಕನ ನಡುವೆ ಯಾವುದೇ ಸಂಘರ್ಷ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಶರ್ಮಾ ಹಾಗೂ ಕೊಹ್ಲಿಯವರ ಕಳಪೆ ಪ್ರದರ್ಶನದ ಬಗೆಗಿನ ಆತಂಕಕ್ಕೆ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, "ನೀವು ಆಟದಲ್ಲಿ ಫಾರ್ಮ್ ಹೊಂದಿರಬಹುದು ಅಥವಾ ಕೆಲವೊಮ್ಮೆ ಫಾರ್ಮ್ ಕಳೆದುಕೊಳ್ಳುವುದು ಸಾಮಾನ್ಯ. ಇದು ಜೀವನದ ಹಂತಗಳು. ರೋಹಿತ್ ಅವರಿಗೆ ತಾವು ಫಾರ್ಮ್ನಲ್ಲಿ ಇಲ್ಲ ಎನಿಸಿದಾಗ, ಸಿಡ್ನಿ ಟೆಸ್ಟ್ನಿಂದ ಹೊರಗುಳಿಯಲು ಬಯಸಿದರು" ಎಂದು ವಿಶ್ಲೇಷಿಸಿದರು.

ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಈ ತಿಂಗಳ 18 ಅಥವಾ 19ರಂದು ತಂಡವನ್ನು ಅಂತಿಮಪಡಿಸಲಾಗುವುದು ಎಂದು ಹೇಳಿದ ಅವರು, ಆಯ್ಕೆ ಸಮಿತಿ ಮತ್ತು ಕಾರ್ಯದರ್ಶಿ ಚಾಂಪಿಯನ್ಸ್ ಟ್ರೋಫಿ ತಂಡದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News