ಪಂಜಾಬ್ ಕಿಂಗ್ಸ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ
ಹೊಸದಿಲ್ಲಿ : 2025ರ ಆವೃತ್ತಿಯ ಐಪಿಎಲ್‌ಗೆ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನಾಗಿ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ನೇಮಕಗೊಂಡಿದ್ದಾರೆ. ಮೂರು ವಿವಿಧ ಐಪಿಎಲ್ ತಂಡಗಳ ನಾಯಕನಾದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
2024ರಲ್ಲಿ ಐಪಿಎಲ್ ಪ್ರಶಸ್ತಿ ಜಯಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಅಯ್ಯರ್ ಅವರು 26.75 ಕೋ.ರೂ. ಗೆ ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಸಹಿ ಹಾಕಿದ್ದಾರೆ. ನವೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಅಯ್ಯರ್ ಈ ಮೊದಲು ಕೆಕೆಆರ್ ತಂಡವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರು. 2020ರ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಫೈನಲ್‌ಗೆ ತಲುಪಲು ನಾಯಕತ್ವವಹಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಎರಡು ವಿಭಿನ್ನ ತಂಡಗಳೊಂದಿಗೆ ಫೈನಲ್ ತಲುಪಿದ ಏಕೈಕ ನಾಯಕನಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅಯ್ಯರ್‌ಗಿಂತ ಮೊದಲು ಕೇವಲ ಇಬ್ಬರು ಆಟಗಾರರು ಮೂರು ವಿವಿಧ ಫ್ರಾಂಚೈಸಿಗಳ ನಾಯಕನಾಗಿದ್ದರು. ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮಹೇಲ ಜಯವರ್ಧನೆ ಕಿಂಗ್ಸ್ ಇಲೆವೆನ್ ಪಂಜಾಬ್‌ನ ನೇತೃತ್ವವಹಿಸುವ ಮೂಲಕ ತನ್ನ ಐಪಿಎಲ್ ಪಯಣ ಆರಂಭಿಸಿದ್ದರು. ಆ ನಂತರ ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಾಯಕನಾಗಿದ್ದರು.
ಅದೇ ರೀತಿ, ಆಸ್ಟ್ರೇಲಿಯದ ಬ್ಯಾಟರ್ ಸ್ಟೀವ್ ಸ್ಮಿತ್ ಪಂದ್ಯಾವಳಿಯಲ್ಲಿ ಮೂರು ತಂಡಗಳಾದ-ಪುಣೆ ವಾರಿಯರ್ಸ್ ಇಂಡಿಯಾ, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ನ ನಾಯಕತ್ವ ವಹಿಸಿದ್ದರು.
ನನ್ನ ಮೇಲೆ ತಂಡವು ವಿಶ್ವಾಸ ಇಟ್ಟಿರುವುದು ನನಗೆ ಸಂದ ಗೌರವ. ಕೋಚ್ ಪಾಂಟಿಂಗ್‌ರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಎದುರು ನೋಡುತ್ತಿರುವೆ. ಎಳೆ ಹಾಗೂ ಹಳೆಯ ಆಟಗಾರರ ಮಿಶ್ರಣದೊಂದಿಗೆ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಪಂಜಾಬ್ ಪರ ಚೊಚ್ಚಲ ಪ್ರಶಸ್ತಿಯನ್ನು ಜಯಿಸುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್ ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದೇನೆ ಎಂದು ಅಯ್ಯರ್ ಹೇಳಿದ್ದಾರೆ.
2024ರ ಋತು ಶ್ರೇಯಸ್ ಅಯ್ಯರ್ ಪಾಲಿಗೆ ಮರೆಯಲಾರದ ವರ್ಷ. ಕೆಕೆಆರ್ ಪರ ಐಪಿಎಲ್ ಪ್ರಶಸ್ತಿ ಗೆದ್ದಿರುವುದಲ್ಲದೆ, ಮುಂಬೈ ಕ್ರಿಕೆಟ್ ತಂಡವು ಎರಡನೇ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ತಂಡದ ನಾಯಕತ್ವವಹಿಸಿದ್ದರು.
ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿಯನ್ನು ಗೆದ್ದಿರುವ ಮುಂಬೈ ಕ್ರಿಕೆಟ್ ತಂಡದಲ್ಲಿ ಅಯ್ಯರ್ ಪ್ರಮುಖ ಆಟಗಾರನಾಗಿದ್ದಾರೆ.