ಐಸಿಸಿ ಚಾಂಪಿಯನ್ಸ್ ಟ್ರೋಫಿ: ಬಿಳಿ ಜಾಕೆಟ್ ಅನಾವರಣಗೊಳಿಸಿದ ವಸೀಂ ಅಕ್ರಂ

Update: 2025-01-14 15:31 GMT

ವಸೀಂ ಅಕ್ರಂ | PC : PTI 

ಹೊಸದಿಲ್ಲಿ: ಎಂಟು ವರ್ಷಗಳ ನಂತರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯು ಮುಂದಿನ ತಿಂಗಳು ಪಾಕಿಸ್ತಾನ ಹಾಗೂ ದುಬೈನಲ್ಲಿ ನಡೆಯಲಿದೆ. ಹಿಂದಿನ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯು 2017ರಲ್ಲಿ ನಡೆದಿತ್ತು.

ಪಾಕಿಸ್ತಾನದ ಲೆಜೆಂಡ್ ಹಾಗೂ ಮಾಜಿ ನಾಯಕ ವಸೀಂ ಅಕ್ರಂ ಒಳಗೊಂಡಿರುವ ಪ್ರೊಮೊ ವೀಡಿಯೊದಲ್ಲಿ ಪ್ರತಿಷ್ಠಿತ ಬಿಳಿ ಜಾಕೆಟ್‌ಗೆ ಗೌರವ ಸಲ್ಲಿಸಿರುವ ಐಸಿಸಿ, 8 ತಂಡಗಳು ಭಾಗವಹಿಸಲಿರುವ ಚಾಂಪಿಯನ್ಸ್ ಟ್ರೋಫಿಯ ಪಯಣದಲ್ಲಿ ಭಾಗಿಯಾಗುವಂತೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಆಹ್ವಾನಿಸಿದೆ.

ಬಹುನಿರೀಕ್ಷಿತ ಪಂದ್ಯಾವಳಿಯು ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿದ್ದು, 19 ದಿನಗಳ ಕಾಲ 15 ಪಂದ್ಯಗಳು ನಡೆಯುತ್ತವೆ. ಅಗ್ರ 8 ತಂಡಗಳ ಮಧ್ಯೆ ತೀವ್ರ ಹೋರಾಟವನ್ನು ನಿರೀಕ್ಷಿಸಲಾಗುತ್ತಿದೆ.

ಆರಂಭಿಕ ಹಂತದಲ್ಲಿ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ತಂಡವು ಮೂರು ಗ್ರೂಪ್ ಹಂತದ ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಪಂದ್ಯಾವಳಿಯ ಮಹತ್ವವನ್ನು ಒತ್ತಿ ಹೇಳಿದ ಐಸಿಸಿ, ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ತಂಡಗಳು ಚಾಂಪಿಯನ್ಸ್ ಟ್ರೋಫಿಗಾಗಿ ಮಾತ್ರವಲ್ಲದೆ ಪ್ರತಿಷ್ಠಿತ ಬಿಳಿ ಜಾಕೆಟ್‌ಗಳಿಗಾಗಿಯೂ ಸ್ಪರ್ಧಿಸುತ್ತವೆ. ಇದು ಶ್ರೇಷ್ಠತೆ ಹಾಗೂ ದೃಢಸಂಕಲ್ಪದ ಸಂಕೇತವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ವೈಟ್ ಜಾಕೆಟ್, ಚಾಂಪಿಯನ್‌ಗಳು ಧರಿಸುವ ಗೌರವದ ಬ್ಯಾಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಪೀಳಿಗೆಗೆ ಸ್ಫೂರ್ತಿ ನೀಡುವ ಪರಂಪರೆಯನ್ನು ಸಾಕಾರಗೊಳಿಸುತ್ತದೆ.

ಮೂರು ದಶಕಗಳ ಕಾಲ ಕ್ರಿಕೆಟ್ ಚಾಂಪಿಯನ್ ಆಗಿದ್ದ ವಸೀಂ ಅಕ್ರಂ, ಪ್ರೊಮೊ ವೀಡಿಯೊದಲ್ಲಿ ಬಿಳಿ ಜಾಕೆಟ್‌ಗಳ ಮಹತ್ವ ಎತ್ತಿ ತೋರಿಸಿದ್ದಾರೆ.

ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಅತ್ಯುತ್ತಮ ಆಟಗಾರರನ್ನು ಪ್ರತಿನಿಧಿಸುತ್ತದೆ. ಶ್ರೇಷ್ಠತೆಯನ್ನು ಸಂಕೇತಿಸುವ ಬಿಳಿ ಜಾಕೆಟ್ ಅನಾವರಣಗೊಳ್ಳುವುದರಿಂದ ಜಾಗತಿಕ ಕ್ರಿಕೆಟ್ ಸಮುದಾಯದಲ್ಲಿ ಈ ಟೂರ್ನಿಯ ಬಗ್ಗೆ ಉತ್ಸಾಹ ಹೆಚ್ಚಾಗುತ್ತದೆ. ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ತಂಡವು ಪಂದ್ಯಾವಳಿಯನ್ನು ಗೆಲ್ಲುತ್ತದೆ. ಏಕೆಂದರೆ ಪ್ರತಿಯೊಂದು ಪಂದ್ಯವೂ ಒತ್ತಡದಿಂದ ಕೂಡಿದ್ದು, ಎಲ್ಲ ತಂಡಗಳು ವಿರಾಮವಿಲ್ಲದೆ ಗೆಲುವಿಗಾಗಿ ಹೋರಾಡಲಿವೆ ಎಂದು ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಅಕ್ರಂ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News