ಟೆಸ್ಟ್ ಕೋಚ್ ಆಗಿ ಲಕ್ಷ್ಮಣ್ ಉತ್ತಮ ಆಯ್ಕೆ: ಮೊಂಟಿ ಪೆನಸರ್
ಮುಂಬೈ: ಬಿಳಿ ಚೆಂಡು ಅಥವಾ 20 ಮತ್ತು 50 ಓವರ್‌ಗಳ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಬೇರೆ ಬೇರೆ ಕೋಚ್‌ಗಳನ್ನು ನೇಮಿಸುವ ಕಲ್ಪನೆ ಹೊಸತೇನೂ ಅಲ್ಲ. ಕೆಲವು ತಂಡಗಳು ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿವೆ ಹಾಗೂ ಇಂಗ್ಲೆಂಡ್ ನಂಥ ಕೆಲವು ತಂಡಗಳ ಮಟ್ಟಿಗೆ ಅದು ಯಶಸ್ವಿಯೂ ಆಗಿದೆ. ಆದರೆ ಪಾಕಿಸ್ತಾನದಂಥ ಕೆಲವು ತಂಡಗಳ ಮೇಲೆ ಅದು ಪ್ರತಿಕೂಲ ಪರಿಣಾಮವನ್ನೂ ಬೀರಿದೆ.
ಆದರೆ, ಈ ಪ್ರಯೋಗ ಭಾರತದಲ್ಲಿ ನಡೆದಿಲ್ಲ. ಭಾರತವು ಎಲ್ಲಾ ಮಾದರಿಗಳ ಕ್ರಿಕೆಟ್‌ಗೆ ಒಂದೇ ಕೋಚ್ ಹೊಂದುವ ನೀತಿಯನ್ನು ಮುಂದುವರಿಸಿಕೊಂಡು ಬಂದಿದೆ.
ಆದರೆ, ಈ ನೀತಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್‌ಗೆ ಅನ್ವಯಿಸುವ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮೊಂಟಿ ಪೆನಸರ್ ಸಂಶಯ ವ್ಯಕ್ತಪಡಿಸಿದ್ದಾರೆ. ಗಂಭೀರ್ ಭಾರತ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡು ಆರೂ ತಿಂಗಳಾಗಿದೆ. ಈ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ನಿರ್ವಹಣೆ ನಗಣ್ಯವಾಗಿದೆ.
ಗಂಭೀರ್ ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ರಾಹುಲ್ ದ್ರಾವಿಡ್‌ರ ಸ್ಥಾನವನ್ನು ಕಳೆದ ವರ್ಷದ ಜುಲೈಯಲ್ಲಿ ವಹಿಸಿದ್ದಾರೆ. ಆ ಬಳಿಕ ಅವರ ಉಸ್ತುವಾರಿಯಲ್ಲಿ 10 ಟೆಸ್ಟ್ ಪಂದ್ಯಗಳು ನಡೆದಿವೆ. ಅವುಗಳ ಪೈಕಿ ಕೇವಲ ಮೂರನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಗಿದೆ. ಭಾರತವು ಆರು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಒಂದನ್ನು ಡ್ರಾಗೊಳಿಸಿಕೊಂಡಿದೆ.
ಟೆಸ್ಟ್‌ಗಳು ಮತ್ತು ಸೀಮಿತ ಓವರ್ ಗಳ ಕ್ರಿಕೆಟ್‌ಗೆ ಭಾರತವು ಪ್ರತ್ಯೇಕ ಕೋಚ್‌ಗಳನ್ನು ಹೊಂದಿದರೆ ಪರಿಸ್ಥಿತಿ ಸುಧಾರಿಸಬಹುದೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೊಂಟಿ ಪೆನಸರ್, ‘‘ನನಗೆ ಹಾಗೆ ಅನಿಸುತ್ತದೆ. ಅದು ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ’’ ಎಂದರು.
‘‘ಗಂಭೀರ್ ಏಕದಿನ ಮತ್ತು ಟಿ20 ಪಂದ್ಯಗಳ ಮೇಲೆ ಗಮನ ನೀಡಬಹುದು. ಟೆಸ್ಟ್ ಕೋಚ್ ಆಗಿ, ಉದಾಹರಣೆಗೆ ವಿ.ವಿ.ಎಸ್. ಲಕ್ಷ್ಮಣ್‌ರನ್ನು ತರಬಹುದು. ಅಥವಾ ಅವರನ್ನು ಗಂಭೀರ್‌ರ ಸಹಾಯಕ್ಕಾಗಿ ಬ್ಯಾಟಿಂಗ್ ಕೋಚ್ ಆಗಿಯೂ ತರಬಹುದಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.