ಮಾರ್ಚ್ 23ರಿಂದ ಐಪಿಎಲ್ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ
ಹೊಸದಿಲ್ಲಿ : ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)-2025 ಮಾರ್ಚ್ 23ರಿಂದ ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಬಿಸಿಸಿಐ ಸಾಮಾನ್ಯ ಸಭೆಯ ನಂತರ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್ ಶುಕ್ಲಾ, 2025ರ ಐಪಿಎಲ್ ಪಂದ್ಯಾವಳಿ ಮಾರ್ಚ್ 23ರಂದು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಕಳೆದ ನವೆಂಬರ್ ನಲ್ಲಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ಎರಡು ದಿನಗಳ ಕಾಲ ಐಪಿಎಲ್ 2025ರ ಮೆಗಾ ಹರಾಜು ನಡೆದಿತ್ತು. ಒಟ್ಟು 182 ಆಟಗಾರರು 639.15 ಕೋಟಿ ರೂ.ಗೆ ಹರಾಜಾಗಿದ್ದರು. ಹರಾಜಿನ ಪೂರ್ವದಲ್ಲಿ ತಂಡಗಳು ಬಿಸಿಸಿಐ ಜೊತೆ ಹಲವು ನಿಯಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದವು.
ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ 27 ಕೋಟಿ ರೂ.ಗೆ ಹರಾಜಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವೆಚ್ಚಕ್ಕೆ ಹರಾಜಾಗಿರುವ ಆಟಗಾರನಾಗಿ ಹೊರಹೊಮ್ಮಿದರು, ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ 26.75 ಕೋಟಿ ರೂ.ಗೆ ಮತ್ತು ವೆಂಕಟೇಶ್ ಅಯ್ಯರ್ 23.75 ಕೋಟಿ ರೂ.ಗೆ ಹರಾಜಾಗಿದ್ದರು.