ಆಸ್ಟೇಲಿಯನ್ ಓಪನ್ | ಝ್ವೆರೆವ್, ಸಬಲೆಂಕಾ ಶುಭಾರಂಭ

Update: 2025-01-12 15:53 GMT

PC : PTI 

ಮೆಲ್ಬರ್ನ್: ವಿಶ್ವದ ನಂ.2ನೇ ರ್ಯಾಂಕಿನ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಹಾಗೂ ಹಾಲಿ ಚಾಂಪಿಯನ್ ಆರ್ಯನಾ ಸಬಲೆಂಕಾ ರವಿವಾರ ಆರಂಭವಾದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದರು.

ಝ್ವೆರೆವ್ ಮೊದಲ ಸುತ್ತಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಫ್ರೆಂಚ್ ಆಟಗಾರ ಲುಕಾಸ್ ಪೌಲಿ ಅವರನ್ನು 6-4, 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಕಳೆದ ವರ್ಷದ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಝ್ವೆರೆವ್ ಇದೀಗ ಸತತ 9ನೇ ಬಾರಿ ಮೆಲ್ಬರ್ನ್ ಟೂರ್ನಿಯಲ್ಲಿ 2ನೇ ಸುತ್ತು ತಲುಪಿದ್ದಾರೆ.

ಝ್ವೆರೆವ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಪೆಡ್ರೊ ಮಾರ್ಟಿನೆಝ್‌ರನ್ನು ಎದುರಿಸಲಿದ್ದಾರೆ.

ಇತ್ತೀಚೆಗೆ ರೋಮ್ ಹಾಗೂ ಪ್ಯಾರಿಸ್ ಮಾಸ್ಟರ್ಸ್-1000 ಟೂರ್ನಿಯಲ್ಲಿ ಜಯ ಸಾಧಿಸಿರುವ ಝ್ವೆರೆವ್ ಭಾರೀ ಆತ್ಮವಿಶ್ವಾಸದೊಂದಿಗೆ ಪ್ರಸಕ್ತ ಟೂರ್ನಿಗೆ ಪ್ರವೇಶಿಸಿದ್ದಾರೆ. 36ನೇ ಬಾರಿ ಗ್ರ್ಯಾನ್‌ಸ್ಲಾಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಜಪಾನಿನ ಹಿರಿಯ ಟೆನಿಸ್ ಪಟು ಕೀ ನಿಶಿಕೋರಿ 4 ಗಂಟೆಗಳ ಕಾಲ ನಡೆದ ಮೊದಲ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ಬ್ರೆಝಿಲ್‌ನ ಥಿಯಾಗೊ ಮೊಂಟೆರೊರನ್ನು 4-6, 6-7(4/7), 7-5, 6-2, 6-3 ಸೆಟ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅಮೆರಿಕದ ಟಾಮಿ ಪೌಲ್ ಅಥವಾ ಆಸ್ಟ್ರೇಲಿಯದ ಕ್ರಿಸ್ ಒಕೊನೆಲ್‌ರನ್ನು ಎದುರಿಸಲಿದ್ದಾರೆ.

ನಾರ್ವೆಯ ಕಾಸ್ಪರ್ ರೂಡ್ ಅವರು ಜೌಮ್ ಮುನಾರ್ ವಿರುದ್ಧ 6-3, 1-6, 7-5, 2-6, 6-1 ಸೆಟ್‌ಗಳಿಂದ ಮಣಿಸಿದರು.

ಸತತ 3ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಸಬಲೆಂಕಾ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 2017ರ ಯು.ಎಸ್. ಓಪನ್ ವಿನ್ನರ್ ಸ್ಲೊಯೆನ್ ಸ್ಟೀಫನ್ಸ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿದರು.

ಮೊದಲ ಸೆಟ್‌ನಲ್ಲಿ ಸ್ವಲ್ಪ ಹಿನ್ನಡೆ ಕಂಡಿದ್ದ ಬೆಲಾರುಸ್ ಆಟಗಾರ್ತಿ 71 ನಿಮಿಷಗಳಲ್ಲಿ ಜಯ ಸಾಧಿಸಿದರು. ಮೆಲ್ಬರ್ನ್‌ನಲ್ಲಿ ಸತತ 15ನೇ ಗೆಲುವು ದಾಖಲಿಸಿದರು.

ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಝೆಂಗ್ ಕ್ವಿನ್‌ವೆನ್ ಕಳಪೆ ಆರಂಭದಿಂದ ಚೇತರಿಸಿಕೊಂಡು ಅಂಕಾ ಟೊಡೊನಿ ಅವರನ್ನು 7-6(7/3), 6-1 ಅಂತರದಿಂದ ಸೋಲಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News