ತಲೆಗೆ ಪದೇ ಪದೇ ಚೆಂಡು ಬಡಿತ: 27ನೇ ವಯಸ್ಸಿನಲ್ಲೇ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾ ಆಟಗಾರ!

ವಿಲ್ ಪುಕೋವ್ಸ್ಕಿ | PC : NDTV
ಸಿಡ್ನಿ: ಬ್ಯಾಟಿಂಗ್ ವೇಳೆ ತಲೆಗೆ ಪದೇ ಪದೇ ಚೆಂಡು ಬಡಿಯುತ್ತಿರುವುದರಿಂದ, ಆಸ್ಟ್ರೇಲಿಯಾದ ಟೆಸ್ಟ್ ಆರಂಭಿಕ ಆಟಗಾರ ವಿಲ್ ಪುಕೋವ್ಸ್ಕಿ ಅವರು ಎಲ್ಲ ಮಾದರಿಯ ಕ್ರಿಕೆಟ್ ನಿಂದ ತಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.
ತಜ್ಞರು ಸಮಿತಿಯೊಂದು ನೀಡಿದ ಶಿಫಾರಸ್ಸನ್ನು ಆಧರಿಸಿ, ಪುಕೋವ್ಸ್ಕಿ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ.
ವಿಲ್ ಪುಕೋವ್ಸ್ಕಿ ಅವರು ತಮ್ಮ ಬ್ಯಾಟಿಂಗ್ ವೇಳೆ ತಮ್ಮ ತಲೆಗೆ ಸರಣಿ ಚೆಂಡು ಬಡಿತದ ಘಟನೆಗಳಿಗೆ ಈಡಾಗಿದ್ದು, ಇದರಿಂದಾಗಿ, ಅವರು ತಮ್ಮ ವೃತ್ತಿಜೀವನದಲ್ಲಿ ಅಸ್ಥಿರತೆಗೆ ಗುರಿಯಾಗಿದ್ದರು. 2024ರಲ್ಲಿ ಕಡೆಯ ಬಾರಿಗೆ ಇಂತಹ ಚೆಂಡು ಬಡಿತಕ್ಕೆ ವಿಲ್ ಪುಕೋವ್ಸ್ಕಿ ಒಳಗಾಗಿದ್ದರು.
ಶೆಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ವಿಲ್ ಪುಕೋವ್ಸ್ಕಿ ತಲೆಗೆ ಚೆಂಡು ಬಡಿದಿದ್ದರಿಂದ ಗಾಯಗೊಂಡ ಅವರು, ಅನಿವಾರ್ಯವಾಗಿ ಪಂದ್ಯದಿಂದ ನಿವೃತ್ತರಾಗಿದ್ದರು. ಹೀಗಾಗಿ, ಅವರನ್ನು ಆಸ್ಟ್ರೇಲಿಯನ್ ಸಮ್ಮರ್ ಕ್ರೀಡಾಕೂಟದಿಂದ ಬದಿಗೆ ಸರಿಸಲಾಗಿತ್ತು. 2024ರ ಇಂಗ್ಲಿಷ್ ಸಮ್ಮರ್ ಕ್ರೀಡಾಕೂಟಕ್ಕಾಗಿ ಲೀಸಸ್ಟರ್ ಶೈರ್ ತಂಡದೊಂದಿಗೆ ಮಾಡಿಕೊಂಡಿದ್ದ ಗುತ್ತಿಗೆಯಿಂದ ಅವರು ಹಿಂದೆ ಸರಿಯಬೇಕಾಗಿ ಬಂದಿತ್ತು ಎಂದು ಐಸಿಸಿ ವರದಿಗಳು ಹೇಳಿವೆ.
ಮಂಗಳವಾರ ಬೆಳಗ್ಗೆ SEN’s Whatley ಸುದ್ದಿ ವಾಹಿನಿಯಲ್ಲಿ 27 ವರ್ಷದ ವಿಲ್ ಪುಕೋವ್ಸ್ಕಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
“ನಾನು ಉತ್ತಮ ಸನ್ನಿವೇಶಗಳಲ್ಲಿ ಬ್ಯಾಟಿಂಗ್ ಬರುತ್ತಿದ್ದೆ ಅನ್ನಿಸುತ್ತದೆ. ನಾನು ಮತ್ತೆ ಕ್ರಿಕೆಟ್ ಆಡಲು ಹೋಗುವುದಿಲ್ಲ. ತುಂಬಾ ಸರಳವಾಗಿ ಹೇಳುವುದಾದರೆ, ಇದು ತುಂಬಾ ಕಠಿಣ ವರ್ಷವಾಗಿತ್ತು. ಮುಂದೆ ನಾನೆಂದೂ ಯಾವುದೇ ಹಂತದ ಕ್ರಿಕೆಟ್ ನಲ್ಲಿ ಆಡುವುದಿಲ್ಲ”, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ವೈದ್ಯಕೀಯ ತಂಡವೊಂದು 27 ವರ್ಷದ ವಿಲ್ ಪುಕೋವ್ಸ್ಕಿ ಅವರಿಗೆ ನಿವೃತ್ತರಾಗುವಂತೆ ಶಿಫಾರಸು ಮಾಡಿತ್ತು. ತಮ್ಮ ವೃತ್ತಿ ಜೀವನದಲ್ಲಿ 36 ಬಾರಿ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಆಡಿರುವ ವಿಲ್ ಪುಕೋವ್ಸ್ಕಿ, ಏಳು ಶತಕಗಳು ಹಾಗೂ ಒಂಭತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಪೈಕಿ, 2020ರಲ್ಲಿ ದಕ್ಷಿಣ ಆಸ್ಟ್ರೇಲಿಯ ತಂಡದ ವಿರುದ್ಧ ತಮ್ಮ ರಾಜ್ಯ ತಂಡಕ್ಕಾಗಿ ಗಳಿಸಿದ್ದ ಅಜೇಯ 255 ರನ್ ಕೂಡಾ ಸೇರಿದೆ.