ಬಿಸಿಸಿಐ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ
ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಳಿಯ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಹಾಗೂ ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯು ಮುಂಬೈನಲ್ಲಿ ರವಿವಾರ ನಡೆದಿದೆ.
ಬಿಸಿಸಿಐನಲ್ಲಿ ತೆರವಾಗಿದ್ದ ಪ್ರಮುಖ ಸ್ಥಾನಗಳಿಗೆ ಸೈಕಿಯಾ ಹಾಗೂ ಭಾಟಿಯಾ ಅವರಷ್ಟೇ ಸ್ಪರ್ಧಿಸಿದ್ದರು. ಮಂಡಳಿಯ ಚುನಾವಣಾಧಿಕಾರಿ ಹಾಗೂ ಭಾರತದ ಮಾಜಿ ಚುನಾವಣಾ ಆಯುಕ್ತ ಅಚಲ್ ಕುಮಾರ್ ಅವರು ಪಟ್ಟಿಯನ್ನು ಮಂಗಳವಾರ ಅಂತಿಮಗೊಳಿಸಿದ್ದರು.
ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗಿತ್ತು. ಹೀಗಾಗಿ, ಸೈಕಿಯಾ ಅವರು ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿಸಿಸಿಐ ಖಜಾಂಚಿಯಾಗಿದ್ದ ಆಶೀಶ್ ಶೆಲ್ಲಾರ್ ಅವರು ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಆದ್ದರಿಂದ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನದಲ್ಲಿ ಭಾಟಿಯಾ ಮುಂದುವರಿಯಲಿದ್ದಾರೆ.