ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಸೆಮಿ ಫೈನಲ್‌ನಲ್ಲಿ ಸೋತ ಸಾತ್ವಿಕ್, ಚಿರಾಗ್

Update: 2025-01-11 15:50 GMT

ಸಾತ್ವಿಕ್, ಚಿರಾಗ್ | PC : ANI 

ಕೌಲಾಲಂಪುರ: ಭಾರತದ ಸ್ಟಾರ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ.

ಶನಿವಾರ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.9ನೇ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ವಿರುದ್ಧ ದಕ್ಷಿಣ ಕೊರಿಯಾದ ಕಿಮ್ ವನ್ ಹೊ ಹಾಗೂ ಸೆವೊ ಸೆವುಂಗ್ ಜಾ 21-10, 21-15 ಗೇಮ್‌ಗಳ ಅಂತರದಿಂದ ಜಯಶಾಲಿಯಾದರು.

ಭಾರತೀಯ ಜೋಡಿ ನಿಧಾನಗತಿಯ ಆರಂಭ ಪಡೆದಿದ್ದು 6-11ರಿಂದ ಹಿನ್ನಡೆಯಲ್ಲಿತ್ತು. ಉತ್ತಮ ಆರಂಭದ ಲಾಭ ಪಡೆದ ಕೊರಿಯನ್ನರು ಮೊದಲ ಗೇಮ್ ಅನ್ನು ಕೇವಲ 19 ನಿಮಿಷಗಳಲ್ಲಿ 21-10 ಅಂತರದಿಂದ ಗೆದ್ದುಕೊಂಡರು.

7ನೇ ಶ್ರೇಯಾಂಕದ ಭಾರತೀಯ ಜೋಡಿಯು ಎರಡನೇ ಗೇಮ್‌ನಲ್ಲಿ ಚೇತರಿಸಿಕೊಂಡಿದ್ದು, ಒಂದು ಹಂತದಲ್ಲಿ 11-8ರಿಂದ ಮುನ್ನಡೆಯಲ್ಲಿತ್ತು. ಆದರೆ ಮುನ್ನಡೆಯ ಲಾಭ ಪಡೆಯುವಲ್ಲಿ ವಿಫಲವಾಗಿ ಅಂತಿಮವಾಗಿ 15-21 ಅಂತರದಿಂದ ಸೋಲುಂಡಿದೆ.

ಸಾತ್ವಿಕ್ ಹಾಗೂ ಚಿರಾಗ್ ಜನವರಿ 14ರಿಂದ ಆರಂಭವಾಗಲಿರುವ ಯೊನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ. 32ರ ಸುತ್ತಿನ ಪಂದ್ಯದಲ್ಲಿ ಮಲೇಶ್ಯದ ವೀ ಚೊಂಗ್ ಮಾನ್ ಹಾಗೂ ಕಾಯ್ ವುನ್ ಟೀ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News