ಅಕ್ಟೋಬರ್ 25 ರಂದು ಕೇರಳಕ್ಕೆ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ!
ಕೊಚ್ಚಿ : ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡ ಮತ್ತು ಅದರ ನಾಯಕ ಲಿಯೋನೆಲ್ ಮೆಸ್ಸಿ ಅಕ್ಟೋಬರ್ 25, 2025 ರಂದು ಕೇರಳಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮೆಸ್ಸಿ ನವೆಂಬರ್ 2, 2025 ರವರೆಗೆ ಕೇರಳದಲ್ಲಿಯೇ ಇರುತ್ತಾರೆ.
ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇರಳ ಕ್ರೀಡಾ ಸಚಿವ ವಿ ಅಬ್ದುರಹಿಮಾನ್, ಮೆಸ್ಸಿ ಏಳು ದಿನಗಳ ಕಾಲ ಕೇರಳದಲ್ಲಿಯೇ ಇರುತ್ತಾರೆ ಎಂದು ದೃಢಪಡಿಸಿದರು. ಈ ಹಿಂದೆ ನಿಗದಿಪಡಿಸಲಾದ ಸೌಹಾರ್ದ ಪಂದ್ಯದ ಹೊರತಾಗಿ, ಮೆಸ್ಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 20 ನಿಮಿಷಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ, ವಿ ಅಬ್ದುರಹಿಮಾನ್ ಅವರು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಆಹ್ವಾನಿಸಿರುವುದಾಗಿ ಘೋಷಿಸಿದ್ದರು. ಅರ್ಜೆಂಟಿನಾ ತಂಡವು ಸೌಹಾರ್ದ ಪಂದ್ಯವನ್ನು ಆಡಲು ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು.
"ಕ್ರೀಡೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಭಾಗವಾಗಿ, ನಾವು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕೇರಳಕ್ಕೆ ಆಹ್ವಾನಿಸಿದ್ದೇವೆ. ಕಳೆದ ವಾರ, ನಾನು ಸ್ಪೇನ್‌ಗೆ ಪ್ರಯಾಣ ಬೆಳೆಸಿ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೆ. ಅವರು 2025 ರಲ್ಲಿ ಭಾರತದಲ್ಲಿ ಸ್ನೇಹಪರ ಪಂದ್ಯವನ್ನು ಆಡಲು ಒಪ್ಪಿಕೊಂಡಿದ್ದಾರೆ" ಎಂದು ವಿ ಅಬ್ದುರಹಿಮಾನ್ ಹೇಳಿದರು.
"ಕೇರಳದಲ್ಲಿ ಫುಟ್ಬಾಲ್ ಅನ್ನು ಉತ್ತೇಜಿಸಲು, ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೊಡ್ಡ ಪ್ರಮಾಣದ ಅಭಿಯಾನಗಳೊಂದಿಗೆ ಕ್ರೀಡಾ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಆರು ತಿಂಗಳ ಹಿಂದೆ, ನಾವು ಕೇರಳದ ಮೊದಲ ಕ್ರೀಡಾ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ, 5,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಖಾಸಗಿ ಹೂಡಿಕೆಗಳನ್ನು ಕೇರಳಕ್ಕೆ ಆಕರ್ಷಿಸಿದ್ದೇವೆ. ಈ ಯೋಜನೆಗಳಲ್ಲಿ ಹೆಚ್ಚಿನವು ಈಗಾಗಲೇ ನಡೆಯುತ್ತಿವೆ. ಕ್ರೀಡೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಭಾಗವಾಗಿ, ನಾವು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕೇರಳಕ್ಕೆ ಆಹ್ವಾನಿಸಿದ್ದೇವೆ" ಎಂದು ಕೇರಳ ಕ್ರೀಡಾ ಸಚಿವರು ಹೇಳಿದರು.