ಥಾಣೆ ಆಸ್ಪತ್ರೆಗೆ ದಾಖಲಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪರಿಸ್ಥಿತಿ ಗಂಭೀರ
ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟ ಕಾರಣ ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಇತ್ತೀಚೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಾಂಬ್ಳಿ ಅವರು ಇತ್ತೀಚೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತಮ್ಮ ಗುರು ರಮಾಕಾಂತ್ ಅಚ್ರೇಕರ್ ಅವರ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಕಾಂಬ್ಳಿ ಅವರನ್ನು ಥಾಣೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. 52ರ ಹರೆಯದ ಕಾಂಬ್ಳಿ ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ. ಆದರೂ ಇನ್ನೂ ಗಂಭೀರವಾಗಿದೆ. ಅವರ ಅನಾರೋಗ್ಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಕಾಂಬ್ಳಿ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಬಹಿರಂಗವಾದ ನಂತರ ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರುಗಳು ಸಹಾಯಕ್ಕೆ ಮುಂದಾಗಿದ್ದರು. ಕಪಿಲ್ ದೇವ್ ಹಾಗೂ ಸುನೀಲ್ ಗವಾಸ್ಕರ್ ಸಹಾಯ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ನಾನು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದೆ. ನನ್ನ ಮಗ , 10 ವರ್ಷದ ನನ್ನ ಮಗಳು ಹಾಗೂ ಪತ್ನಿ ನನ್ನ ನೆರವಿಗೆ ಬಂದರು. ಇದು ಒಂದು ತಿಂಗಳ ಹಿಂದೆ ನಡೆದ ಘಟನೆ. ನನ್ನ ತಲೆ ತಿರುಗಲು ಅರಂಭಿಸಿತು. ನಾನು ಕುಸಿದು ಬಿದ್ದೆ. ಡಾಕ್ಟರ್ ನನಗೆ ಆಡ್ಮಿಟ್ ಆಗುವಂತೆ ಹೇಳಿದರು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ನಡದ ಸಂವಾದದಲ್ಲಿ ಕಾಂಬ್ಳಿ ಹೇಳಿದ್ದಾರೆ.
2013ರಲ್ಲಿ ಎರಡು ಬಾರಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆಗ ಸಚಿನ್ ತೆಂಡುಲ್ಕರ್ ಆರ್ಥಿಕ ನೆರವು ನೀಡಿದ್ದರು ಎಂದು ಕಾಂಬ್ಳಿ ಬಹಿರಂಗಪಡಿಸಿದರು.
ತನ್ನ 9 ವರ್ಷಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನಲ್ಲಿ ಕಾಂಬ್ಳಿ ಅವರು ಭಾರತದ ಪರ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿದ್ದರು. ಎರಡು ದ್ವಿಶತಕಗಳ ಸಹಿತ ನಾಲ್ಕು ಟೆಸ್ಟ್ ಶತಕಗಳನ್ನು ಸಿಡಿಸಿದ್ದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಿದ್ದಾರೆ.