ಆಸ್ಟ್ರೇಲಿಯ ವಿರುದ್ಧದ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಶಮಿ ಫಿಟ್ ಇಲ್ಲ: ಬಿಸಿಸಿಐ
ಹೊಸದಿಲ್ಲಿ,: ಭಾರತದ ಸ್ಟಾರ್ ವೇಗಿ ಮುಹಮ್ಮದ್ ಶಮಿ ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಸಂಪೂರ್ಣ ಫಿಟ್ ಇಲ್ಲ. ಅವರ ಎಡ ಮೊಣಕಾಲಿನಲ್ಲಿ ಸ್ವಲ್ಪ ಊತ ಇದೆ ಎಂದು ಬಿಸಿಸಿಐ ಸೋಮವಾರ ದೃಢಪಡಿಸಿದೆ.
ಬಲ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಭಾರತೀಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ಚೇತರಿಕೆಗಾಗಿ ಬಿಸಿಸಿಐ ವೈದ್ಯಕೀಯ ತಂಡವು ಕಾರ್ಯನಿರತವಾಗಿತ್ತು. ಶಮಿ ಅವರು ಹಿಮ್ಮಡಿ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದರೆ ಬೌಲಿಂಗ್ ಒತ್ತಡದಿಂದಾಗಿ ಶಮಿ ಅವರ ಎಡ ಮೊಣಕಾಲಿನಲ್ಲಿ ಸ್ವಲ್ಪ ಮಟ್ಟಿಗೆ ಊತ ಕಾಣಿಸಿಕೊಂಡಿದೆ. ದೀರ್ಘ ಸಮಯದ ನಂತರ ಬೌಲಿಂಗ್ ಮಾಡಿದ ಕಾರಣ ಊತವು ಕಾಣಿಸಿಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.
ನವೆಂಬರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ರಣಜಿ ಪಂದ್ಯದಲ್ಲಿ ಬಂಗಾಳದ ಪರ 43 ಓವರ್‌ಗಳ ಬೌಲಿಂಗ್ ಮಾಡಿದ್ದ ಶಮಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಎಲ್ಲ 9 ಪಂದ್ಯಗಳಲ್ಲೂ ಆಡಿದ್ದರು. ಮುಂಬರುವ ಟೆಸ್ಟ್ ಸರಣಿಗೆ ಸಜ್ಜಾಗಲು ಟೂರ್ನಿಯ ವೇಳೆ ಹೆಚ್ಚುವರಿ ಬೌಲಿಂಗ್ ಅಭ್ಯಾಸ ನಡೆಸಿದ್ದರು.
ಶಮಿ ಅವರ ಮೊಣಕಾಲಿಗೆ ಬೌಲಿಂಗ್ ಒತ್ತಡವನ್ನು ನಿಭಾಯಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಕಂಡುಕೊಂಡಿದೆ. ಹೀಗಾಗಿ ಅವರು ಆಸೀಸ್ ವಿರುದ್ಧ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಅವರು ಅನ್ ಫಿಟ್ ಎಂದು ಘೋಷಿಸಲ್ಪಟ್ಟಿದ್ದಾರೆ.