ಜಪಾನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ | ಪಿ.ವಿ. ಸಿಂಧುಗೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
Update: 2024-11-14 16:15 GMT
ಟೋಕಿಯೊ : ಕುಮಾಮೊಟೊ ಮಾಸ್ಟರ್ಸ್ ಜಪಾನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ವಿಜೇತೆ ಪಿ.ವಿ. ಸಿಂಧು ಸೋಲನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.
ಲಕ್ಷ್ಯ ಸೇನ್ ಹಾಗೂ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಬೇಗನೆ ನಿರ್ಗಮಿಸಿದ ಕಾರಣ ವಿಶ್ವದ ನಂ.20ನೇ ಆಟಗಾರ್ತಿ ಸಿಂಧು ಕಣದಲ್ಲಿದ್ದ ಭಾರತದ ಏಕೈಕ ಸ್ಪರ್ಧಿಯಾಗಿದ್ದರು.
ಒಂದು ಗಂಟೆ ಹಾಗೂ 15 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ವಿಶ್ವದ ನಂ.23ನೇ ಆಟಗಾರ್ತಿ ಕೆನಡಾದ ಮಿಚೆಲ್ ಲೀ ವಿರುದ್ಧ 21-17, 16-21, 17-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಲೀ ಅವರು ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಯು ಜಿನ್ ಸಿಮ್ ರನ್ನು ಎದುರಿಸಲಿದ್ದಾರೆ.