ಧೋನಿ, ಕೊಹ್ಲಿ, ರೋಹಿತ್ ಹಾಗೂ ದ್ರಾವಿಡ್ ರಿಂದ ನನ್ನ ಪುತ್ರನ 10 ವರ್ಷಗಳ ವೃತ್ತಿಜೀವನ ಹಾಳಾಯಿತು: ಸಂಜು ಸ್ಯಾಮ್ಸನ್ ತಂದೆ ಆರೋಪ

Update: 2024-11-14 07:02 GMT

ಸಂಜು ಸ್ಯಾಮ್ಸನ್ (Photo: PTI) 

ಹೊಸದಿಲ್ಲಿ: ಸತತ ಎರಡು ಶತಕಗಳನ್ನು ಗಳಿಸುವ ಮೂಲಕ ಭಾರತೀಯ ಟಿ-20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಂತೆ ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕಂಡು ಬರುತ್ತಿದ್ದಾರೆ. ಈ ನಡುವೆ, ಸಂಜು ಸ್ಯಾಮ್ಸನ್ ಅವರ ತಂದೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ಹಾಗೂ ಆಡಳಿತ ಮಂಡಳಿಯು ನನ್ನ ಪುತ್ರನ 10 ವರ್ಷಗಳ ವೃತ್ತಿ ಜೀವನವನ್ನು ಹಾಳುಗೆಡವಿತು ಎಂದು ಸ್ಫೋಟಗೊಂಡಿರುವುದು ಸೆರೆಯಾಗಿದೆ.

ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಗೆ ಸಂದರ್ಶನ ನೀಡಿರುವ ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಸ್ಯಾಮ್ಸನ್, ಧೋನಿ, ರೋಹಿತ್, ಕೊಹ್ಲಿ ಹಾಗೂ ದ್ರಾವಿಡ್ ರಿಂದಾಗಿ ನನ್ನ ಪುತ್ರ ಮುಂಚಿತವಾಗಿಯೇ ಭಾರತ ತಂಡ ಸೇರ್ಪಡೆಯಾಗುವುದರಿಂದ ವಂಚಿತಗೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ನಾಲ್ಕು ಮಂದಿಯಿಂದಾಗಿ ನನ್ನ ಪುತ್ರನ 10 ವರ್ಷಗಳ ವೃತ್ತಿ ಜೀವನ ಹಾಳಾಯಿತು. ಅವರು ಆತನಿಗೆ ಎಷ್ಟು ನೋವುಂಟು ಮಾಡಿದರೊ, ಅಷ್ಟೇ ಬಲವಾಗಿ ಆತ ಸಮಸ್ಯೆಯ ಸುಳಿಯಿಂದ ಮೇಲೆದ್ದು ಬಂದ” ಎಂದು ಹೇಳಿರುವ ಅವರು, ಇದರಿಂದಾಗಿ ಸಂಜು ಸ್ಯಾಮ್ಸನ್ ತನ್ನ 30ನೇ ವಯಸ್ಸಿನಲ್ಲಿ ತಂಡದಲ್ಲಿ ನಿಯಮಿತ ಸ್ಥಾನ ಪಡೆಯುವಂತಾಯಿತು ಎಂದು ಹೇಳಿದ್ದಾರೆ.

2015ರಲ್ಲೇ ಭಾರತೀಯ ಟಿ-20 ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ 21 ವರ್ಷದ ಸ್ಯಾಮ್ಸನ್, ಚುಟುಕು ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ಭಾರಿ ಪ್ರತಿಭಾವಂತ ಆಟಗಾರ ಎಂದೇ ಪರಿಗಣನೆಗೆ ಒಳಗಾಗಿದ್ದರು. ಆದರೆ, ಬ್ಯಾಟಿಂಗ್ ನಲ್ಲಿನ ಸ್ಥಿರತೆಯ ಕೊರತೆ ಹಾಗೂ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಯಂತಹ ಬ್ಯಾಟರ್ ಗಳ ಕಾರಣಕ್ಕೆ 2021ರವರೆಗೆ ಅವರಿಗೆ ಭಾರತೀಯ ಟಿ-20 ಕ್ರಿಕೆಟ್ ತಂಡದ ಬಾಗಿಲು ತೆರೆದಿರಲಿಲ್ಲ. ಆದರೆ, ಇತ್ತೀಚಿನ ಐಪಿಎಲ್ ಋತುಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಸಂಜು ಸ್ಯಾಮ್ಸನ್, ಮತ್ತೆ ಭಾರತೀಯ ಟಿ-20 ಕ್ರಿಕೆಟ್ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News