ರಣಜಿ | 360 ದಿನಗಳ ಬಳಿಕ ಫಿಟ್ನೆಸ್ ಸಾಬೀತುಪಡಿಸಿದ ಮುಹಮ್ಮದ್ ಶಮಿ ; 4 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ವೇಗಿ

Update: 2024-11-14 12:14 GMT

ಮುಹಮ್ಮದ್ ಶಮಿ | PC : X  

ಹೊಸದಿಲ್ಲಿ : ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬಂಗಾಳದ ಪರ ನಾಲ್ಕು ನಿರ್ಣಾಯಕ ವಿಕೆಟ್ ಗಳನ್ನು ಗಳಿಸುವ ಮೂಲಕ ಸ್ಟಾರ್ ಟೀಂ ಇಂಡಿಯಾ ವೇಗಿ ಮುಹಮ್ಮದ್ ಶಮಿ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.

2023 ರ ಏಕದಿನ ವಿಶ್ವಕಪ್ ವೇಳೆ ಮುಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ವಿಶ್ವಕಪ್ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಸಂಪೂರ್ಣ ಗುಣಮುಖರಾಗಲು ಒಂದು ವರ್ಷ ಬೇಕಾಯಿತು. ಪ್ರಸಕ್ತ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬಂಗಾಳ ಪರ ಕಣಕ್ಕಿಳಿದಿರುವ ಮುಹಮ್ಮದ್ ಶಮಿ ಕ್ರಿಕೆಟ್ ಕಣಕ್ಕೆ ಮರಳಿದ ಮೊದಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇಂದೋರ್ ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬಂಗಾಳ ಹಾಗೂ ಮಧ್ಯ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 228 ರನ್ ಗಳಿಸಿ ಆಲೌಟ್ ಆಯಿತು. ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ ತಂಡದ ನಾಲ್ಕು ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆದುಕೊಳ್ಳುವಲ್ಲಿ ಮುಹಮ್ಮದ್ ಶಮಿ ಯಶಸ್ವಿಯಾದರು.

ಮಧ್ಯ ಪ್ರದೇಶ ತಂಡದ ನಾಯಕ ಶುಭಮ್ ಶರ್ಮಾ (8) ರನ್ನು ಔಟ್ ಮಾಡಿ ವಿಕೆಟ್ ಖಾತೆ ತೆರೆದ ಮುಹಮ್ಮದ್ ಶಮಿ ಆ ಬಳಿಕ ಮೂರು ವಿಕೆಟ್ ಕಿತ್ತರು. ಈ ಮೂಲಕ ಮಧ್ಯ ಪ್ರದೇಶ ತಂಡವನ್ನು ಕೇವಲ 167 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ 19 ಓವರ್ ಗಳನ್ನು ಎಸೆದಿರುವ ಮುಹಮ್ಮದ್ ಶಮಿ 54 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಶಮಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News