ಐಪಿಎಲ್ | ಗುಜರಾತ್ ಟೈಟಾನ್ಸ್‌ನ ಸಹಾಯಕ ಕೋಚ್ ಆಗಿ ಪಾರ್ಥಿವ್ ಪಟೇಲ್ ನೇಮಕ
ಹೊಸದಿಲ್ಲಿ: ತನ್ನ ನೂತನ ಸಹಾಯಕ ಕೋಚ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್‌ರನ್ನು ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ನೇಮಕ ಮಾಡಿದೆ.
2022ರಲ್ಲಿ ತನ್ನ ಚೊಚ್ಚಲ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಗುಜರಾತ್ ಟೈಟಾನ್ಸ್ ತಂಡ ಬುಧವಾರ ಪತ್ರಿಕಾ ಪ್ರಕಟನೆಯ ಮೂಲಕ ಪಟೇಲ್ ನೇಮಕದ ಕುರಿತು ಅಧಿಕೃತ ಘೋಷಣೆ ಮಾಡಿದೆ.
ಟೈಟಾನ್ಸ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಗೆ(ಐಪಿಎಲ್)ತಯಾರಿ ನಡೆಸುತ್ತಿದೆ. ಬ್ಯಾಟಿಂಗ್ ತಂತ್ರಗಳು ಹಾಗೂ ರಣನೀತಿಯ ಕುರಿತು ಪಾರ್ಥಿವ್ ಅವರ ಒಳನೋಟಗಳು ಆಟಗಾರರ ಕೌಶಲ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ತೀಕ್ಷ್ಣವಾದ ಕ್ರಿಕೆಟ್ ಚಾಣಾಕ್ಷತೆ ಹಾಗೂ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಪಾರ್ಥಿವ್ ಪಟೇಲ್ ಕೋಚಿಂಗ್ ಸಿಬ್ಬಂದಿಯನ್ನು ಬಲಪಡಿಸುವ ಜೊತೆಗೆ ಆಟಗಾರರ ಕಾರ್ಯಕ್ಷಮತೆಗೆ ಕೊಡುಗೆ ನೀಡಲಿದ್ದಾರೆ ಎಂದು ಗುಜರಾತ್ ಟೈಟಾನ್ಸ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಈ ಹಿಂದೆ ಬ್ಯಾಟಿಂಗ್ ಕೋಚ್ ಹಾಗೂ ಸಲಹೆಗಾರರಾಗಿದ್ದ ಗ್ಯಾರಿ ಕರ್ಸ್ಟನ್ ರಿಂದ ತೆರವಾದ ಸ್ಥಾನಕ್ಕೆ ಪಟೇಲ್‌ರನ್ನು ನೇಮಕ ಮಾಡಲಾಗಿದೆ. ಐಪಿಎಲ್ ಫ್ರಾಂಚೈಸಿಯನ್ನು ತೊರೆದಿದ್ದ ಕರ್ಸ್ಟನ್ ಪಾಕಿಸ್ತಾನ ಕ್ರಿಕೆಟ್ ತಂಡದ ಸೀಮಿತ ಓವರ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇರಿದ್ದರು.
ಪಾರ್ಥಿವ್ ಪಟೇಲ್ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕೆಲಸ ಮಾಡಿದ್ದರು. 2020ರ ಡಿಸೆಂಬರ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಪಟೇಲ್ ಅವರು ಮುಂಬೈ ತಂಡವನ್ನು ಸೇರ್ಪಡೆಯಾಗಿದ್ದರು. ಆನಂತರ ವೀಕ್ಷಕವಿವರಣೆ ಹಾಗೂ ಪ್ರತಿಭಾ ಶೋಧದ ಕೆಲಸದಲ್ಲಿ ವ್ಯಸ್ತರಾಗಿದ್ದರು.