2ನೇ ಏಕದಿನ: ಭಾರತ ವಿರುದ್ಧ ಶ್ರೀಲಂಕಾ ಜಯಭೇರಿ

Update: 2024-08-04 16:48 GMT

PC : PTI 

ಕೊಲಂಬೊ : ಜೆಫ್ರಿ ವಾಂಡರ್ಸೆ(6-33)ಹಾಗೂ ಚರಿತ್ ಅಸಲಂಕಾ(3-20)ಸ್ಪಿನ್ ಮೋಡಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ 32 ರನ್ ಅಂತರದಿಂದ ಸೋಲುಂಡಿದೆ. ಈ ಗೆಲುವಿನ ಮೂಲಕ ಲಂಕಾವು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯವು ಟೈನಲ್ಲಿ ಕೊನೆಗೊಂಡಿತ್ತು.

ರವಿವಾರ ಗೆಲ್ಲಲು 241 ಗುರಿ ಬೆನ್ನಟ್ಟಿದ ಭಾರತವು 42.2 ಓವರ್‌ಗಳಲ್ಲಿ 208 ರನ್ ಗಳಿಸಿ ಆಲೌಟಾಯಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ(64 ರನ್, 44 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರೆ, ಅಕ್ಷರ್ ಪಟೇಲ್(44 ರನ್,44 ಎಸೆತ) ಹಾಗೂ ಶುಭಮನ್ ಗಿಲ್(35 ರನ್, 44 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಶ್ರೀಲಂಕಾ 240/9: ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವನ್ನು ಭಾರತ ಕ್ರಿಕೆಟ್ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 240 ರನ್‌ಗೆ ನಿಯಂತ್ರಿಸಿತು.

ಅವಿಷ್ಕಾ ಫೆರ್ನಾಂಡೊ(40 ರನ್, 62 ಎಸೆತ) ಹಾಗೂ ಕಮಿಂದು ಮೆಂಡಿಸ್(40 ರನ್, 44 ಎಸೆತ)ಶ್ರೀಲಂಕಾದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್(3-30)ಭಾರತದ ಪರ ಯಶಸ್ವಿ ಪ್ರದರ್ಶನ ನೀಡಿದರು.

ನಿಧಾನಗತಿಯ ಆರಂಭ ಪಡೆದ ಶ್ರೀಲಂಕಾ ಮೊದಲ ಪವರ್ ಪ್ಲೇ ವೇಳೆಗೆ 42 ರನ್ ಗಳಿಸಿತು. 25ನೇ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 100ರ ಗಡಿ ದಾಟಿತು. 40ನೇ ಓವರ್‌ನಲ್ಲಿ ಆತಿಥೇಯರು 5 ವಿಕೆಟ್‌ಗೆ 119 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ದುನಿತ್ ವೆಲ್ಲಲಾಗೆ(39 ರನ್, 35 ಎಸೆತ) ಹಾಗೂ ಮೆಂಡಿಸ್ ಅಂತಿಮ 10 ಓವರ್‌ಗಳಲ್ಲಿ ಲಂಕಾ ಪರ ಒಂದಷ್ಟು ರನ್ ಸೇರಿಸಿ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

►ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 50 ಓವರ್‌ಗಳಲ್ಲಿ 240/9

(ಅವಿಷ್ಕ ಫೆರ್ನಾಂಡೊ 40, ಕಮಿಂದು ಮೆಂಡಿಸ್ 40, ವೆಲ್ಲಲಾಗೆ 39, ಸುಂದರ್ 3-30, ಕುಲದೀಪ್ 2-33)

ಭಾರತ: 42.2 ಓವರ್‌ಗಳಲ್ಲಿ 208/10

(ರೋಹಿತ್ ಶರ್ಮಾ 64, ಅಕ್ಷರ್ ಪಟೇಲ್ 44, ಶುಭಮನ್ ಗಿಲ್ 35, ಜೆಫ್ರಿ ವಾಂಡರ್ಸೆ 6-3, ಅಸಲಂಕಾ 3-20)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News