ಭಾರತಕ್ಕೆ ವಾಪಸಾದ ಚಾಂಪಿಯನ್‌ಗೆ ಭವ್ಯ ಸ್ವಾಗತ

Update: 2024-08-17 15:25 GMT

ವಿನೇಶ್ ಫೋಗಟ್ | PC : PTI 

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ‘‘ಕೈಗೆ ಬಂದ ಪದಕ ಬಾಯಿಗೆ ಬಾರದ’’ ಹತಾಶೆಯೊಂದಿಗೆ ಭಾರತೀಯ ಕುಸ್ತಿ ತಾರೆ ವಿನೇಶ್ ಫೋಗಟ್ ಶನಿವಾರ ಭಾರತಕ್ಕೆ ಮರಳಿದ್ದಾರೆ.

ಅವರನ್ನು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ ಪೂನಿಯ ಸೇರಿದಂತೆ ಭಾರೀ ಸಂಖ್ಯೆಯ ಅಭಿಮಾನಿಗಳು ಸ್ವಾಗತಿಸಿದರು. ಅವರನ್ನು ಸ್ವಾಗತಿಸಲು ಅವರ ಕುಟುಂಬ ಸದಸ್ಯರು, ಹಿತೈಷಿಗಳು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಫೋಗಟ್‌ರನ್ನು ಸ್ವಾಗತಿಸಲು ಹರ್ಯಾಣದ ಅವರ ಊರು ಬಲಾಲಿ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಭಾರೀ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜಮಾಯಿಸಿದ್ದರು. ಡೋಲುಗಳ ಹೊಡೆತಕ್ಕೆ ಕುಣಿಯುತ್ತಿದ್ದ ಅವರು, ‘‘ದಲ್ ಭಾತಿ ಚುರ್ಮ, ಹಮಾರಿ ಬೆಹನ್ ಸುರ್ಮ’’ ಮತ್ತು ‘‘ಜಬ್ ತಕ್ ಸೂರಜ್ ಚಾಂದ್ ರಹೇಗ, ವಿನೇಶ್ ತೇರಾ ನಾಮ್ ರಹೇಗ’’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಯಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ್ದರು. ಒಂದನೇ ದಿನದ ಸ್ಪರ್ಧೆಗೆ ಮುನ್ನ ನಡೆದ ತೂಕದಲ್ಲಿ ಅವರ ದೇಹ ತೂಕ ಪರಿಪೂರ್ಣವಾಗಿತ್ತು. ಅಂದು ಅವರು ಪ್ರಿಕ್ವಾರ್ಟರ್ ಫೈನಲ್, ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ಜಯ ಗಳಿಸಿ ಮಾರನೇ ದಿನ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಮಾರನೇ ದಿನ ಫೈನಲ್‌ಗೆ ಮುನ್ನ ನಡೆದ ತೂಕದಲ್ಲಿ ಅವರ ದೇಹತೂಕ ನಿಗದಿತ ಮಿತಿಗಿಂತ 100 ಗ್ರಾಮ್ ಹೆಚ್ಚಾಗಿತ್ತು. ಹಾಗಾಗಿ, ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕ್ರೀಡಾಕೂಟದಲ್ಲಿ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಿತು ಮತ್ತು ಅವರಿಗೆ ಯಾವುದೇ ಪದಕವನ್ನು ನಿರಾಕರಿಸಿತು.

ಇದನ್ನು ಪ್ರಶ್ನಿಸಿ ಫೋಗಟ್ ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್)ಕ್ಕೆ ಮನವಿ ಸಲ್ಲಿಸಿದರು. ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ನಿರ್ದೇಶನ ನೀಡುವಂತೆ ಅವರು ಕೋರಿದರು. ಆದರೆ, ಇತ್ತೀಚೆಗೆ ಮಧ್ಯಂತ ತೀರ್ಪು ನೀಡಿದ ನ್ಯಾಯಾಲಯವು ಅವರ ಕೋರಿಕೆಯನ್ನು ತಿರಸ್ಕರಿಸಿದೆ. ಹಾಗಾಗಿ, ಈಗ ಅವರು ಭಾರವಾದ ಹೃದಯದಿಂದ ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗಿದ್ದಾರೆ.

ಪಾಲಮ್ 360 ಖಾಪ್ ಮುಖ್ಯಸ್ಥರಾಗಿರುವ ದಿಲ್ಲಿಯ ಸುರೇಂದರ್ ಸೊಳಂಕಿ ಸೇರಿಂತೆ ಹಲವು ಖಾಪ್ ನಾಯಕರು, ರೋಹ್ತಕ್ ಕ್ಷೇತ್ರದ ಕಾಂಗ್ರೆಸ್ ಸಂಸದ ದೀಪೆಂದರ್ ಹೂಡ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೇಶ್ ಫೋಗಟ್ ದೇಶಕ್ಕೆ ಮರಳುವಾಗ ಅವರನ್ನು ಚಿನ್ನದ ಪದಕ ವಿಜೇತೆಯಂತೆ ಸ್ವಾಗತಿಸಲಾಗುವುದು ಎಂಬುದಾಗಿ ಹರ್ಯಾಣದ ಖಾಪ್‌ಗಳು ಈ ಹಿಂದೆ ಘೋಷಿಸಿದ್ದರು.

ತೆರೆದ ವಾಹನದಲ್ಲಿ ಮೆರವಣಿಗೆ

29 ವರ್ಷದ ಕುಸ್ತಿಪಟುವನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಒಯ್ಯಲಾಯಿತು. ಅವರ ಒಂದು ಬದಿಯಲ್ಲಿ ಸಂಸದ ಹೂಡ ನಿಂತಿದ್ದರೆ, ಇನ್ನೊಂದು ಬದಿಯಲ್ಲಿ ಕುಸ್ತಿಪಟು ಬಜರಂಗ ಪೂನಿಯ ನಿಂತಿದ್ದರು. ಮೆರವಣಿಗೆಯ ದಾರಿಯಲ್ಲಿ ಜನರತ್ತ ಕೈಬೀಸುತ್ತಿದ್ದ ಅವರು ಕಣ್ಣೀರು ಒರೆಸುತ್ತಿದ್ದರು. ಅವರೊಂದಿಗೆ ಮಾತನಾಡಲು ಮುಂದಾದ ಟೆಲಿವಿಶನ್ ಪತ್ರಕರ್ತರತ್ತ ಕೈಜೋಡಿಸಿದರು.

ಬಳಿಕ ಮೌನ ಮುರಿದ ಅವರು, ‘‘ನನಗೆ ನೀಡಿರುವ ಈ ಭವ್ಯ ಸ್ವಾಗತಕ್ಕಾಗಿ ಈ ದೇಶದ ಜನರಿಗೆ ನಾನು ಋಣಿಯಾಗಿದ್ದೇನೆ’’ ಎಂದು ಹೇಳಿದರು.

ಅವರನ್ನು ನೋಡಲು ದಾರಿಯುದ್ದಕ್ಕೂ ಜನರು ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಮೆರವಣಿಗೆಯುದ್ದಕ್ಕೂ ಅವರು ಮುಂದಕ್ಕೆ ಬಾಗಿ ಯುವಜನರ ಕೈಕುಲುಕಿದರು ಮತ್ತು ತಲೆಬಾಗಿಸಿ ಹಿರಿಯರ ಆಶೀರ್ವಾದ ಪಡೆದರು.

ಪದಕ ಇಲ್ಲದಿದ್ದರೂ ನಮ್ಮ ಚಾಂಪಿಯನ್: ಸಾಕ್ಷಿ ಮಲಿಕ್

ಒಲಿಂಪಿಕ್ಸ್‌ನಿಂದ ಫೋಗಟ್ ವಾಪಸಾಗಿರುವುದು ನಮಗೆಲ್ಲಾ ದೊಡ್ಡ ದಿನ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಈ ಸಂದರ್ಭದಲ್ಲಿ ಹೇಳಿದರು. ಫೋಗಟ್ ತನ್ನ ದೇಶ ಮತ್ತು ದೇಶದ ಮಹಿಳೆಯರಿಗಾಗಿ ಅಮೋಘ ಕೆಲಸ ಮಾಡಿದ್ದಾರೆ ಎಂಬುದಾಗಿ ಬಣ್ಣಿಸಿದರು. ‘‘ಅವರಿಗೆ ಪದಕ ಸಿಕ್ಕಿತೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಅವರು ನಮಗೆಲ್ಲಾ ಚಾಂಪಿಯನ್ ಆಗಿದ್ದಾರೆ’’ ಎಂದು ಸಾಕ್ಷಿ ಮಲಿಕ್ ಹೇಳಿದರು.

ವಿನೇಶ್‌ಗೆ ಸ್ವಾಗತ ನೀಡಲು ಕಾಂಗ್ರೆಸ್-ಬಿಜೆಪಿ ಪೈಪೋಟಿ!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ವರೆಗೆ ಸಾಗಿ ತೂಕದಲ್ಲಿ ಅಲ್ಪ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅನರ್ಹಗೊಂಡು ಸ್ವದೇಶಕ್ಕೆ ವಾಪಸಾದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್‌ಗೆ ಶನಿವಾರ ಹೊಸದಿಲ್ಲಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ರೋಹ್ತಕ್‌ನ ಕಾಂಗ್ರೆಸ್ ಸಂಸದ ದೀಪೆಂದರ್ ಹೂಡ ಮತ್ತು ಪಕ್ಷದ ಇತರ ನಾಯಕರು ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೋಗಟ್‌ರನ್ನು ಸ್ವಾಗತಿಸಿದರು.

ಅದೇ ವೇಳೆ, ಬಿಜೆಪಿ ಕೂಡ ಫೋಗಟ್‌ರಿಗೆ ಭವ್ಯ ಸ್ವಾಗತ ನೀಡಲು ಯೋಜಿಸಿತ್ತು. ಆದರೆ, ಬಜರಂಗ ಪೂನಿಯ ಸೇರಿದಂತೆ ಇತರ ಹಲವಾರು ಕುಸ್ತಿಪಟುಗಳ ಸಮ್ಮುಖದಲ್ಲಿ ಫೋಗಟ್ ಅವರಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರೋಡ್‌ಶೋ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದರಿಂದ ಬಿಜೆಪಿಯ ಯೋಜನೆ ತಲೆಕೆಳಗಾಯಿತು.

ನಮ್ಮ ಬಳಿ ಅಗತ್ಯ ಸಂಖ್ಯೆಯಿದ್ದರೆ ಕಾಂಗ್ರೆಸ್ ಪಕ್ಷವು ವಿನೇಶ್ ಫೋಗಟ್‌ರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವುದು ಎಂದು ಹರ್ಯಾಣ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡ ಈಗಾಗಲೇ ಹೇಳಿದ್ದಾರೆ. ದೀಪೆಂದರ್ ಹೂಡ ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ತೆರವುಗೊಳಿಸಿರುವ ರಾಜ್ಯಸಭಾ ಸ್ಥಾನಕ್ಕೆ ಸೆಪ್ಟಂಬರ್ 3ರಂದು ಚುನಾವಣೆ ನಡೆಯಲಿದೆ.

‘‘ವಿನೇಶ್ ನಮ್ಮ ಚಾಂಪಿಯನ್ ಆಗಿದ್ದರು, ಆಗಿದ್ದಾರೆ ಮತ್ತು ಮುಂದೆಯೂ ಆಗಿರುತ್ತಾರೆ. ನಮ್ಮ ಪುತ್ರಿ ವಿನೇಶ್ ಫೋಗಟ್‌ರನ್ನು ಸ್ವಾಗತಿಸಲು ದಿಲ್ಲಿಯಿಂದ ಬಲಾಲಿ ಗ್ರಾಮದವರೆಗೂ ಜನರು ಸಾಲುಗಟ್ಟಿ ನಿಂತಿದ್ದಾರೆ’’ ಎಂದು ದೀಪೆಂದರ್ ಹೂಡ ಹೇಳಿದರು.

ಈ ನಡುವೆ, ಕಾಂಗ್ರೆಸ್ ಹೊಸದಿಲ್ಲಿಯಲ್ಲಿ ವಿನೇಶ್‌ರ ರೋಡ್‌ಶೋ ನಡೆಸುತ್ತಿರುವಾಗ, ಚಂಡೀಗಢದಲ್ಲಿ ಹರ್ಯಾಣದ ಬಿಜೆಪಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಪತ್ರಕರ್ತರೊಂದಿಗೆ ಮಾತನಾಡಿ, ವಿನೇಶ್ ಫೋಗಟ್‌ಗೆ ಸಂಬಂಧಿಸಿ ತನ್ನ ಸರಕಾರ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ತಿಳಿಸಿದರು.

‘‘ಹರ್ಯಾಣ ಸರಕಾರ ಮತ್ತು ಬಿಜೆಪಿ ವಿನೇಶ್ ಫೋಗಟ್ ಜೊತೆಗಿದೆ. ಅವರು ನಮ್ಮ ಮಗಳು, ನಾವು ಯಾವತ್ತೂ ಅವರ ಪರವಾಗಿ ನಿಲ್ಲುತ್ತೇವೆ’’ ಎಂದು ಸೈನಿ ಹೇಳಿದರು.

90 ಸದಸ್ಯರ ಹರ್ಯಾಣ ವಿಧಾನಸಭೆಗೆ ಅಕ್ಟೋಬರ್ 1ರಂದು ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News