ಲಂಕಾಗೆ ಮತ್ತೆ ಸೋಲು: ಟಿ20 ಸರಣಿ ಭಾರತದ ಕೈವಶ
ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 7 ವಿಕೆಟ್ಗಳ ಸುಲಭ ಜಯ ಸಾಧಿಸಿದ ಭಾರತ ತಂಡ ಸರಣಿ ಕೈವಶ ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 43 ರನ್ ಗಳ ವಿಜಯ ಸಾಧಿಸಿತ್ತು.
ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ 8 ಓವರ್ ಗಳಲ್ಲಿ ಗೆಲುವಿಗೆ 78 ರನ್ ಗಳ ಗುರಿ ಪಡೆದ ಭಾಗ, ಕೇವಲ 6.3 ಓವರ್ ಗಳಲ್ಲಿ 81 ರನ್ ಗಳಿಸಿ ಗೆಲುವಿನ ಗುರಿ ಸಾಧಿಸಿದರು. ಯಶಸ್ವಿ ಜೈಸ್ವಾಲ್ ಕೇವಲ 15 ಎಸೆತಗಳಲ್ಲಿ 30 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು.
ಮಳೆ ಕಾರಣದಿಂದ ಎರಡನೇ ಇನಿಂಗ್ಸ್ ವಿಳಂಬವಾದ್ದರಿಂದ ಡಿಎಲ್ಎಸ್ ವಿಧಾನದಲ್ಲಿ ಪಂದ್ಯದ ಓವರ್ಗಳ ಸಂಖ್ಯೆಯನ್ನು ಕಡಿತಗೊಳಿಸಲಾಯಿತು. ಇದಕ್ಕೂ ಮುನ್ನ ಭಾರತದ ಪರ ರವಿ ಬಿಷ್ಣೋಯಿ ಅದ್ಭುತ ಬೌಲಿಂಗ್ (26ಕ್ಕೆ 3 ವಿಕೆಟ್) ಪ್ರದರ್ಶಿಸಿದರು. ಭಾರತೀಯ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಶ್ರೀಲಂಕಾ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ಗಳಿಗೆ ಕಟ್ಟಿ ಹಾಕಲು ಸಾಧ್ಯವಾಯಿತು. ಅರ್ಷದೀಪ್ ಸಿಂಗ್ (2/24), ಹಾರ್ದಿಕ್ ಪಾಂಡ್ಯ (2/23) ಮತ್ತು ಅಕ್ಷರ್ ಪಟೇಲ್ (2/30) ಉತ್ತಮ ಸಾಥ್ ನೀಡಿದರು. ನಿರಂತರವಾಗಿ ವಿಕೆಟ್ ಗಳನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ಕೊನೆಯ ಓವರ್ ಗಳಲ್ಲಿ ರನ್ ಗಳಿಕೆ ಕುಂಠಿತಗೊಂಡಿತು.
ಶ್ರೀಲಂಕಾ ಪರ ಕುಶಾಲ್ ಪೆರೇರಾ 34 ಎಸೆತಗಳಲ್ಲಿ 53 ರನ್ ಗಳಿಸಿದರೆ, ಪಥುಲ್ ನಿಸಾಂಕ 24 ಎಸೆತಗಳಲ್ಲಿ 32 ರನ್ ಸಿಡಿಸಿದರು. ಟಾಸ್ ಸೋತ ಶ್ರೀಲಂಕಾ ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟಿತ್ತು. ಭಾರತದ ಪರ ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26) ಹಾರ್ದಿಕ್ ಪಾಂಡ್ಯ (9 ಎಸೆತಗಳಲ್ಲಿ 22) ಗಮನ ಸೆಳೆದರು.