ಬ್ರಿಸ್ಬೇನ್ ಟೆಸ್ಟ್: ಆಸ್ಟ್ರೇಲಿಯ 405/7, ಭಾರೀ ಒತ್ತಡದಲ್ಲಿ ರೋಹಿತ್ ಪಡೆ
ಬ್ರಿಸ್ಬೇನ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟವಾದ ರವಿವಾರ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಬ್ಯಾಟಿಂಗ್ ಹಾಗೂ ರಣತಂತ್ರದ ವಿಚಾರದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, ರೋಹಿತ್ ಬಳಗವು ತೀವ್ರ ಒತ್ತಡಕ್ಕೆ ಸಿಲುಕಿದೆ.
ರವಿವಾರ ಆಸೀಸ್ ಬ್ಯಾಟರ್‌ಗಳು ಭಾರತದ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಮೊದಲ ದಿನದಾಟವು ಬಹುತೇಕ ಮಳೆಗಾಹುತಿಯಾದ ನಂತರ 2ನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 405 ರನ್ ಗಳಿಸಿದೆ.
ಆಸ್ಟ್ರೇಲಿಯ ತಂಡವು ಇಂದು ವಿಕೆಟ್ ನಷ್ಟವಿಲ್ಲದೆ 28 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಉಸ್ಮಾನ್ ಖ್ವಾಜಾ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಾಥನ್ ಮೆಕ್‌ಸ್ವೀನಿ(9 ರನ್)ಕೂಡ ಖ್ವಾಜಾ ಅವರ ಹಾದಿ ಹಿಡಿದರು.
ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ 3ನೇ ವಿಕೆಟ್‌ಗೆ 37 ರನ್ ಜೊತೆಯಾಟದಲ್ಲಿ ಭಾಗಿಯಾದರು. ಲ್ಯಾಬುಶೇನ್ ವಿಕೆಟ್ ಪಡೆದ ನಿತೀಶ್ ರೆಡ್ಡಿ ಈ ಜೋಡಿಯನ್ನು ಬೇರ್ಪಡಿಸಿದರು. ಭಾರತಕ್ಕೆ ಯಾವಾಗಲೂ ತಲೆ ನೋವಾಗಿ ಪರಿಣಮಿಸುವ ಟ್ರಾವಿಸ್ ಹೆಡ್ ಜೊತೆ ಕೈಜೋಡಿಸಿದ ಸ್ಮಿತ್ 4ನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 316ಕ್ಕೆ ತಲುಪಿಸಿದರು. ಸ್ಮಿತ್ ಔಟಾದ ನಂತರ ಮಿಚೆಲ್ ಮಾರ್ಷ್(5 ರನ್) ಜಾಗೀ ಹೆಡ್(152 ರನ್) ಬೆನ್ನುಬೆನ್ನಿಗೆ ಔಟಾದರು. ನಾಯಕ ಕಮಿನ್ಸ್ (20 ರನ್) ದಿನದಾಟದಂತ್ಯಕ್ಕೆ ವಿಕೆಟ್ ಒಪ್ಪಿಸಿದರು.
ಕೈಕೊಟ್ಟ ಭಾರತದ ಫೀಲ್ಡಿಂಗ್ ನಿರ್ಧಾರ:
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಜಯಿಸಿದ ನಂತರ ಮೊದಲು ಫೀಲ್ಡಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಮೋಡ ಕವಿದ ವಾತಾವರಣದಲ್ಲಿ ಮೊದಲು ಬೌಲಿಂಗ್ ಮಾಡಿರುವುದು ಸರಿಯಾಗಿದೆ. ಗಾಬಾ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ನೆರವಾಗುವ ಪ್ರವೃತ್ತಿ ಹೊಂದಿದೆ.
ಆದರೆ, ಭಾರತೀಯ ಬೌಲರ್‌ಗಳು ವಾತಾವರಣದ ಲಾಭ ಪಡೆಯುವಲ್ಲಿ ವಿಫಲವಾದ ಕಾರಣ ರೋಹಿತ್‌ರ ನಿರ್ಧಾರ ತಿರುಗುಬಾಣವಾಯಿತು. ಗಾಬಾ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ತಂಡಗಳು 67 ಪಂದ್ಯಗಳಲ್ಲಿ 42 ಬಾರಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿವೆ. ಉಳಿದ 25 ಪಂದ್ಯಗಳಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದವು.
ಬ್ರಿಸ್ಬೇನ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ತಂಡಗಳು 17 ಬಾರಿ ಜಯ ಸಾಧಿಸಿದ್ದು, 15 ಪಂದ್ಯಗಳನ್ನು ಸೋತಿವೆ. ಆದರೆ ಮೊದಲು ಬೌಲಿಂಗ್ ಮಾಡಿದ್ದ ತಂಡಗಳು 11ರಲ್ಲಿ ಜಯ, 9 ಬಾರಿ ಸೋತಿವೆ.
ರೋಹಿತ್ ಶರ್ಮಾ ಆರಂಭದಲ್ಲಿ ನಿರೀಕ್ಷಿಸಿದಂತೆ ಬೆಳವಣಿಗೆ ನಡೆದಿಲ್ಲ. ಹೀಗಾಗಿ ಅವರು ಕ್ರಿಕೆಟ್ ಪ್ರೇಮಿಗಳು ಹಾಗೂ ಕ್ರಿಕೆಟ್ ತಜ್ಞರಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ.
ಮತ್ತೊಮ್ಮೆ ಮಿಂಚಿದ ಜಸ್‌ಪ್ರಿತ್ ಬುಮ್ರಾ:
ಭಾರತದ ಬೌಲಿಂಗ್ ಸರದಿಯಲ್ಲಿ ಜಸ್‌ಪ್ರಿತ್ ಏಕೈಕ ಆಶಾಕಿರಣವಾಗಿದ್ದು, 72 ರನ್‌ಗೆ ಐದು ವಿಕೆಟ್ ಗೊಂಚಲು ಕಬಳಿಸಿದರು. ತನ್ನ ವೇಗ, ನಿಖರತೆಯ ಮೂಲಕ ಬುಮ್ರಾ ಅವರು ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಟ್ರಾವಿಡ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ವಿಕೆಟ್‌ಗಳನ್ನು ಉರುಳಿಸಿದರು. ಮತ್ತೊಮ್ಮೆ ಇತರ ಬೌಲರ್‌ಗಳಿಂದ ಅವರಿಗೆ ಸಾಕಷ್ಟು ಬೆಂಬಲ ಸಿಗಲಿಲ್ಲ.
ಮುಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ನಿತೀಶ್ ರೆಡ್ಡಿ ಅವರು ಲೈನ್ ಹಾಗೂ ಲೆಂಗ್ತ್‌ನಲ್ಲಿ ಪ್ರಮಾದ ಎಸಗಿದರು. ರವೀಂದ್ರ ಜಡೇಜಗೆ ಮಧ್ಯಮ ಓವರ್‌ಗಳಲ್ಲಿ ರನ್ ಹರಿಯುವುದನ್ನು ನಿಯಂತ್ರಿಸುವ ಗುರಿ ನೀಡಲಾಗಿತ್ತು. ಆದರೆ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿದ್ದು, ತನ್ನ 16 ಓವರ್‌ಗಳಲ್ಲಿ ಒಂದೂ ವಿಕೆಟ್ಟನ್ನು ಪಡೆಯದೆ 76 ರನ್ ಬಿಟ್ಟುಕೊಟ್ಟರು. ಸ್ಮಿತ್ ಹಾಗೂ ಹೆಡ್ ವಿರುದ್ಧ ಸ್ಪಷ್ಟ ಯೋಜನೆ ಇಲ್ಲದಿರುವುದು ಎದ್ದುಕಂಡಿತು.
ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದ ಹೆಡ್, ಸ್ಟೀವ್ ಸ್ಮಿತ್:
ಹೆಡ್ ಹಾಗೂ ಸ್ಮಿತ್ ಪಾಲಿಗೆ ಇಂದು ಸೂಪರ್ ಸಂಡೇ ಆಗಿ ಪರಿಣಮಿಸಿದ್ದು, ಆಸ್ಟ್ರೇಲಿಯ ತಂಡವು 75 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಾಗ ಈ ಇಬ್ಬರು ತಂಡಕ್ಕೆ ಆಸರೆಯಾದರು. 4ನೇ ವಿಕೆಟ್‌ಗೆ 302 ಎಸೆತಗಳಲ್ಲಿ 241 ರನ್ ಜೊತೆಯಾಟ ನಡೆಸಿ ಭಾರತದ ಬೌಲರ್‌ಗಳನ್ನು ಬೆಂಡೆತ್ತಿದರು.
ಸ್ಮಿತ್ 190 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ತಾಳ್ಮೆಯ ಶತಕ(101 ರನ್)ಗಳಿಸಿದರು. ಹೆಡ್ ಅವರು ಕೇವಲ 160 ಎಸೆತಗಳಲ್ಲಿ 18 ಬೌಂಡರಿಗಳ ಸಹಾಯದಿಂದ 152 ರನ್ ಗಳಿಸಿ ಮತ್ತೊಮ್ಮೆ ಬಿರುಸಿನ ಬ್ಯಾಟಿಂಗ್ ಮಾಡಿದರು.
ಭಾರತದ ಬೌಲರ್‌ಗಳು ಒತ್ತಡ ಹೇರುವಲ್ಲಿ ವಿಫಲರಾಗಿದ್ದು, ಆಸ್ಟ್ರೇಲಿಯಕ್ಕೆ ಮೇಲುಗೈ ಸಾಧಿಸಲು ಅವಕಾಶ ನೀಡಿದರು.
ಅಡಿಲೇಡ್‌ನಲ್ಲಿ 140 ರನ್ ಗಳಿಸಿದ್ದ ಹೆಡ್ ಬ್ರಿಸ್ಬೇನ್‌ನಲ್ಲಿ ಈ ಹಿಂದೆ ಆಡಿದ್ದ 3 ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿದ್ದರು. ಈ ಬಾರಿ 152 ರನ್ ಗಳಿಸಿ ಅಬ್ಬರಿಸಿದ್ದಾರೆ. ಹೆಡ್‌ಗೆ ಸಾಥ್ ನೀಡಿದ ಸ್ಮಿತ್ ಹಿಂದಿನ 24 ಇನಿಂಗ್ಸ್‌ಗಳಲ್ಲಿ ಶತಕ ಗಳಿಸುವಲ್ಲಿ ವಿಫಲರಾಗಿದ್ದರು. ಇಂದು ಅವರು 101 ರನ್ ಗಳಿಸಿ ಮಿಂಚಿದ್ದಾರೆ.
ಆಸ್ಟ್ರೇಲಿಯದ ಪರ ದಿನದಾಟದಂತ್ಯಕ್ಕೆ ಅಲೆಕ್ಸ್ ಕ್ಯಾರಿ 47 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದ್ದಾರೆ. ಮಿಚೆಲ್ ಸ್ಟಾರ್ಕ್ 7 ಎಸೆತಗಳಲ್ಲಿ 7 ರನ್ ಗಳಿಸಿ ಸಾಥ್ ನೀಡುತ್ತಿದ್ದಾರೆ. ಈ ಇಬ್ಬರು 3ನೇ ದಿನದಾಟವಾದ ಸೋಮವಾರ ಮತ್ತಷ್ಟು ರನ್ ಸೇರಿಸುವ ವಿಶ್ವಾಸದಲ್ಲಿದ್ದಾರೆ.
ಭಾರತದ ಅಗ್ರ ಕ್ರಮಾಂಕದ ಮೇಲೆ ಹೆಚ್ಚಿದ ಹೊಣೆಗಾರಿಕೆ:
ಭಾರತ ತಂಡವು ಬ್ಯಾಟಿಂಗ್ ಮೂಲಕ ನೀಡುವ ಉತ್ತರವು ಈ ಪಂದ್ಯಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಆದರೆ, ಇತ್ತೀಚೆಗಿನ ಇತಿಹಾಸವು ಅಷ್ಟೊಂದು ಸ್ಫೂರ್ತಿದಾಯಕವಾಗಿಲ್ಲ. ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹಿಂದಿನ 5 ಟೆಸ್ಟ್ ಪಂದ್ಯಗಳಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಆರಂಭಿಕ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಪ್ರದರ್ಶನವು ಹೆಚ್ಚಿನ ಭರವಸೆ ನೀಡಿದೆ. ಜೈಸ್ವಾಲ್ ಜೊತೆಗೆ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಪೈಕಿ ಯಾರು ಇನಿಂಗ್ಸ್ ಆರಂಭಿಸುತ್ತಾರೆ ಎನ್ನುವುದು ಪ್ರಮುಖ ಅಂಶವಾಗಿದೆ. ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಮಧ್ಯಮ ಸರದಿಯಲ್ಲಿ ಹೆಚ್ಚಿನ ಹೊಣೆ ಹೊರಬೇಕಾಗಿದೆ.
ಸದ್ಯ ಆಸ್ಟ್ರೇಲಿಯ ತಂಡವು ಸುಸ್ಥಿತಿಯಲ್ಲಿದ್ದು, ಭಾರತದ ಬ್ಯಾಟರ್‌ಗಳ ಮೇಲೆ ಅಸಾಮಾನ್ಯ ಪ್ರದರ್ಶನ ನೀಡಬೇಕಾದ ಒತ್ತಡ ವಿದೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಹಾಗೂ ನಾಥನ್ ಲಿಯೊನ್,ಪ್ರವಾಸಿ ತಂಡದ ಬ್ಯಾಟರ್‌ಗಳಿಗೆ ಪರೀಕ್ಷೆ ಒಡ್ಡಲು ಸಜ್ಜಾಗಿದ್ದಾರೆ.
ಸರಣಿಯಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಮೂರನೇ ದಿನದಾಟದಲ್ಲಿ ಭಾರತ ತಂಡ ತೀವ್ರ ಹೋರಾಟ ನೀಡಬೇಕಾಗಿದೆ. ಇಂದು ಎರಡನೇ ದಿನದಾಟದುದ್ದಕ್ಕೂ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಭಾರತ ತಂಡವು ಪಂದ್ಯದಲ್ಲಿ ತಿರುಗೇಟು ನೀಡಬಹುದೇ ಅಥವಾ ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಬಹುದೇ? ಎಂಬ ಪ್ರಶ್ನೆ ಉದ್ಬವಿಸಿದೆ. ಆದರೆ, ಪ್ರತಿಕೂಲ ಹವಾಮಾನ ಎಲ್ಲ ಯೋಜನೆಗಳನ್ನು ತಲೆಕೆಳಗಾಗಿಸಬಹುದು ಎನ್ನುವುದನ್ನು ಮರೆಯಲಾಗದು.