ಭಾರತ ವಿರುದ್ಧ ಕೊನೆಯ 3 ಟೆಸ್ಟ್ ನಿಂದ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಔಟ್
ಲಂಡನ್: ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಭಾರತದಲ್ಲಿ ಈಗ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಇನ್ನುಳಿದ 3 ಪಂದ್ಯಗಳಲ್ಲಿ ಆಡುವುದಿಲ್ಲ, ಎಡ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಲೀಚ್ ಭಾರತದ ಪ್ರವಾಸದಿಂದಲೇ ಹೊರಗುಳಿದಿದ್ದಾರೆ.
ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ. ಇಂಗ್ಲೆಂಡ್ ಹೈದರಾಬಾದ್ ನಲ್ಲಿ ಆರಂಭಿಕ ಪಂದ್ಯವನ್ನು ಜಯಿಸಿದರೆ, ಭಾರತ ವಿಶಾಖಪಟ್ಟಣದಲ್ಲಿ 2ನೇ ಪಂದ್ಯವನ್ನು ಜಯಿಸಿ ತಿರುಗೇಟು ನೀಡಿದೆ.
ಲೀಚ್ ಇಂಗ್ಲೆಂಡ್ ಹೈದರಾಬಾದ್ ನಲ್ಲಿ ಆಡಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ವಿಶಾಖಪಟ್ಟಣದಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು(ಇಸಿಬಿ) ರವಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ ಕೋಟ್ ನಲ್ಲಿ ಫೆಬ್ರವರಿ 15ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಗಿಂತ ಮೊದಲು ಇಂಗ್ಲೆಂಡ್ ತಂಡ ಅಬುಧಾಬಿಯಲ್ಲಿ ಬೀಡುಬಿಟ್ಟಿದ್ದು, ಲೀಚ್ ಮುಂದಿನ 24 ಗಂಟೆಗಳಲ್ಲಿ ಅಬುಧಾಬಿಯಿಂದ ಸ್ವದೇಶಕ್ಕೆ ಆಗಮಿಸಲಿದ್ದಾರೆ. ಲೀಚ್ ಅವರ ಮೇಲೆ ಇಂಗ್ಲೆಂಡ್ ಹಾಗೂ ಸೊಮರ್ಸೆಟ್ ನ ವೈದ್ಯಕೀಯ ತಂಡಗಳು ನಿಗಾವಹಿಸಿವೆ. ಲೀಚ್ ಬದಲಿಗೆ ಯಾರಿಗೂ ಕರೆ ನೀಡಿಲ್ಲ ಎಂದು ಇಸಿಬಿ ದೃಢಪಡಿಸಿದೆ.