ಭಾರತಕ್ಕೆ ಐತಿಹಾಸಿಕ ಕಂಚು ಗೆದ್ದುಕೊಟ್ಟ ರೈತನ ಪುತ್ರ ಸರಬ್ಜೋತ್ ಸಿಂಗ್
ಹೊಸದಿಲ್ಲಿ: ಚಿಕ್ಕಂದಿನಲ್ಲಿ ಫುಟ್ಬಾಲ್ ಆಟಗಾರನಾಗಬೇಕೆಂಬ ಕನಸು ಕಂಡು, ಶೂಟಿಂಗ್ ಕ್ರೀಡೆಗೆ ಮಾರು ಹೋಗಿದ್ದ ಶೂಟರ್ ಸರಬ್ಜೋತ್ ಸಿಂಗ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಜೊತೆಗೂಡಿ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ಒಲಿಂಪಿಕ್ಸ್ನ ವೈಯಕ್ತಿಕ ಸ್ಪರ್ಧೆಯಲ್ಲಿ ಸೋಲನುಭವಿಸಿದ ನಂತರ ಸವಾಲಿನ ಸಮಯ ಎದುರಿಸಿದ್ದ ಸರಬ್ಜೋತ್ ಅವರು ತನ್ನ ಮಂಗಳವಾರ ಕಂಚಿನ ಪದಕಕ್ಕಾಗಿ ನಡೆದ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 8.6 ಅಂಕ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು. ಭಾಕರ್ 10.2 ಅಂಕ ಗಳಿಸಿದರು. ಆಗ ಭಾರತವು ಒಟ್ಟು 18.8 ಅಂಕ ಗಳಿಸಿತು. 20.5 ಅಂಕ ಗಳಿಸಿದ ಕೊರಿಯನ್ನರು ಮೊದಲ ಸುತ್ತಿನಲ್ಲಿ 2-0 ಮುನ್ನಡೆ ಪಡೆದರು.
ಅತ್ಯಂತ ಹೆಚ್ಚು ಅಂಕ(16)ಗಳಿಸಿದ ತಂಡ ಮಿಶ್ರ ಟೀಮ್ ಸ್ಪರ್ಧಾವಳಿಗಳಲ್ಲಿ ಪದಕ ಗೆಲ್ಲುತ್ತದೆ.
0-2 ಹಿನ್ನಡೆಯಲ್ಲಿದ್ದ ಭಾರತವು ಮರು ಹೋರಾಟ ನೀಡಿದ್ದು, ಮನು ಹಾಗೂ ಸರಬ್ಜೋತ್ 4 ಗೇಮ್ಗಳಲ್ಲಿ ಜಯ ಸಾಧಿಸಿ ಮುನ್ನಡೆಯನ್ನು 8-2ಕ್ಕೆ ಹೆಚ್ಚಿಸಿಕೊಂಡರು. ಪೂರ್ತಿ 13 ಸುತ್ತಿನ ಸ್ಪರ್ಧಾವಳಿಯಲ್ಲಿ ಮನು ಭಾಕರ್ ಭಾರೀ ಆತ್ಮವಿಶ್ವಾಸದಲ್ಲಿದ್ದರು.
ಒತ್ತಡಕ್ಕೆ ಸಿಲುಕಿದ ಕೊರಿಯನ್ನರು ಎದುರಾಳಿಗೆ ಸಮರ್ಥ ಹೋರಾಟ ನೀಡಲಾಗದೆ 10-16 ಅಂತರದಿAದ ಸೋತಿದ್ದಾರೆ.
ಭಾರತ ಕಂಡ ಓರ್ವಶ್ರೇಷ್ಠ ಶೂಟರ್ ಆಗಿರುವ ಸರಬ್ಜೋತ್ ಸಿಂಗ್ ಅಂಬಾಲದ ರೈತ ಕುಟುಂಬದಿAದ ಬಂದವರು. ಅಂಬಾಲದ ರೈತ ಜಿತೇಂದರ್ ಸಿಂಗ್ ಹಾಗೂ ಗೃಹಿಣಿ ಹರ್ದೀಪ್ ಕೌರ್ ಪುತ್ರನಾಗಿರುವ ಸರಬ್ಜೋತ್ ಚಂಡಿಗಡದ ಡೇವ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಅಭಿಷೇಕ್ ರಾಣಾ ಅವರಲ್ಲಿ ತರಬೇತಿ ಪಡೆದಿದ್ದರು.
10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪ್ರಮುಖ ಶೂಟರ್ ಆಗಿರುವ 22ರ ಹರೆಯದ ಸರಬ್ಜೋತ್ ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸರಬ್ಜೋತ್ ಸಿಂಗ್ 13ನೇ ವಯಸ್ಸಿನಲ್ಲಿ ಫುಟ್ಬಾಲ್ ಆಟಗಾರನಾಗುವ ಕನಸು ಕಂಡಿದ್ದರು. ಆದರೆ ಅವರು ಅಂಬಾಲದ ಭಗಿರಥ್ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿದ್ದಾಗ ಬೇಸಿಗೆ ಶಿಬಿರದ ತಾತ್ಕಾಲಿಕ ಶೂಟಿಂಗ್ ರೇಂಜ್ನಲ್ಲಿ ಕೆಲವು ಮಕ್ಕಳು ಏರ್ ಗನ್ ಚಲಾಯಿಸುವುದನ್ನು ನೋಡಿ ಆಕರ್ಷಿತರಾದರು. 2014ರಲ್ಲಿ ತಂದೆಯ ಬಳಿ ತೆರಳಿದ ಸರಬ್ಜೋತ್, ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳುವ ಬಯಕೆ ವ್ಯಕ್ತಪಡಿಸುತ್ತಾರೆ.
ಶೂಟಿಂಗ್ ಕ್ರೀಡೆಯು ನಮ್ಮಂತಹ ರೈತರಿಗೆ ತುಂಬಾ ದುಬಾರಿಯಾಗಿದೆ ಎಂದು ಜಿತೇಂದರ್ ಸಿಂಗ್ ತನ್ನ ಮಗನಿಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ ಮಗನ ನಿರಂತರ ಒತ್ತಾಯಕ್ಕೆ ಜಿತೇಂದರ್ ಮಣಿದರು.
ಸರಬ್ಜೋತ್ 2019ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಬೆಳಕಿಗೆ ಬಂದರು. 2022ರ ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿರುವ ಭಾರತೀಯ ಶೂಟಿಂಗ್ ತಂಡದಲ್ಲಿದ್ದರು. ಆ ನಂತರ 2023ರ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.
2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕದ ಖಾತೆ ತೆರೆಯುವಲ್ಲಿ ವಿಫಲವಾಗಿದ್ದ ಭಾರತದ ಶೂಟಿಂಗ್ ತಂಡವು ತವರಿಗೆ ಪದಕದೊಂದಿಗೆ ಮರಳಬೇಕಾದ ಒತ್ತಡದಲ್ಲಿತ್ತು. ಅಗ್ರ ಶೂಟರ್ಗಳ ಪಟ್ಟಿ ಸಿದ್ಧಪಡಿಸಿದಾಗ ಸರಬ್ಜೋತ್ ಹೆಸರು ಫೇವರಿಟ್ ಆಗಿತ್ತು. ಸರಬ್ಜೋತ್ ಪ್ರಸಕ್ತ ಗೇಮ್ಸ್ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರೂ 10 ಮೀ. ಪಿಸ್ತೂಲ್ ಸ್ಪರ್ಧೆಯ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ನಿರಾಶೆಗೊಳಿಸಲಿಲ್ಲ.
ಸರಬ್ಜೋತ್ ಈಗಾಗಲೇ ಸೀನಿಯರ್ ಐಎಸ್ಎಸ್ಎಫ್ ವರ್ಲ್ಡ್ ಕಪ್ನಲ್ಲಿ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸರಬ್ಜೋತ್ ಅವರ ಶಾಂತ ಸ್ವಭಾವವು ಅವರನ್ನು ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿಸಿತ್ತು.
ಸರಬ್ಜೋತ್ ಅವರು ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಗಳನ್ನು, 3 ಬಾರಿ ವಿಶ್ವಕಪ್ ಚಿನ್ನದ ಪದಕಗಳನ್ನು, ಜೂನಿಯರ್ ವಿಶ್ವಕಪ್ನಲ್ಲಿ 4 ಚಿನ್ನ, 2 ಬೆಳ್ಳಿ ಪದಕಗಳನ್ನು, ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ.