ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 19ನೇ ಶತಕ: ಇತಿಹಾಸ ನಿರ್ಮಿಸಿದ ಬಾಬರ್ ಆಝಂ

Update: 2023-08-30 15:12 GMT

Photo: PTI

ಮುಲ್ತಾನ್, ಆ.30: ಪಾಕಿಸ್ತಾನದ ನಾಯಕ ಬಾಬರ್ ಆಝಂ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಉತ್ತಮ ಲಯವನ್ನು ಮುಂದುವರಿಸಿದ್ದು ವೇಗವಾಗಿ 19ನೇ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.

ಅಗ್ರ ರ್ಯಾಂಕಿನ ಏಕದಿನ ಆಟಗಾರ ಆಝಂ ಬುಧವಾರ ನೇಪಾಳ ವಿರುದ್ಧ ಏಶ್ಯಕಪ್‌ನ ಮೊದಲ ಪಂದ್ಯದಲ್ಲಿ ಈ ದಾಖಲೆ ಬರೆದರು.

28ರ ಹರೆಯದ ಆಝಂ 102ನೇ ಇನಿಂಗ್ಸ್‌ನಲ್ಲಿ 19ನೇ ಏಕದಿನ ಶತಕ ಸಿಡಿಸಿದರು. ಇದರೊಂದಿಗೆ 104 ಇನಿಂಗ್ಸ್‌ಗಳಲ್ಲಿ 19ನೇ ಶತಕ ಸಿಡಿಸಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಶೀಮ್ ಅಮ್ಲ ದಾಖಲೆಯನ್ನು ಮುರಿದರು. ಭಾರತದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 124ನೇ ಇನಿಂಗ್ಸ್‌ನಲ್ಲಿ 19ನೇ ಶತಕ ಪೂರೈಸಿದ್ದರೆ, ಆಸೀಸ್ ಓಪನರ್ ಡೇವಿಡ್ ವಾರ್ನರ್ 139ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್ 171ನೇ ಇನಿಂಗ್ಸ್‌ನಲ್ಲಿ 19ನೇ ಶತಕ ಗಳಿಸಿದ್ದರು.

31 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿರುವ ಆಝಂ ಪಾಕಿಸ್ತಾನದ ಲೆಜೆಂಡ್‌ಗಳಾದ ಜಾವೇದ್ ಮಿಯಾಂದಾದ್(ಟೆಸ್ಟ್‌ನಲ್ಲಿ 23, ಏಕದಿನದಲ್ಲಿ 8 ಶತಕ) ಹಾಗೂ ಸಯೀದ್ ಅನ್ವರ್(ಏಕದಿನದಲ್ಲಿ 20, ಟೆಸ್ಟ್‌ನಲ್ಲಿ 11 ಶತಕ) ದಾಖಲೆಯನ್ನು ಸರಿಗಟ್ಟಿದ್ದಾರೆ. ಬಾಬರ್ ಏಕದಿನದಲ್ಲಿ 19, ಟೆಸ್ಟ್‌ನಲ್ಲಿ 9 ಹಾಗೂ ಟಿ-20 ಕ್ರಿಕೆಟ್‌ನಲ್ಲಿ 3 ಶತಕಗಳನ್ನು ಗಳಿಸಿದ್ದ್ದಾರೆ.

ನೇಪಾಳ ವಿರುದ್ಧ 131 ಎಸೆತಗಳಲ್ಲಿ 151 ರನ್(14 ಬೌಂಡರಿ, 4ಸಿಕ್ಸರ್)ಗಳಿಸಿದ ಆಝಂ ಪಾಕಿಸ್ತಾನವು 6 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಲು ನೆರವಾದರು. ಇಫ್ತಿಕಾರ್ ಅಹ್ಮದ್(ಔಟಾಗದೆ 109, 71 ಎಸೆತ)ಚೊಚ್ಚಲ ಶತಕ ಸಿಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News