ಪಾಕ್ ಗೆಲುವಿಗೆ ಭಾರತ ಕಾತರ: ಇಲ್ಲಿದೆ ಸ್ವಾರಸ್ಯಕರ ಮಾಹಿತಿ...

Update: 2024-10-14 03:19 GMT

PC: x.com/republic

ಹೊಸದಿಲ್ಲಿ: ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಯ ಭಾನುವಾರದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 9 ರನ್ ಗಳ ಸೋಲು ಕಂಡಿರುವ ಭಾರತ ತಂಡಕ್ಕೆ ಇನ್ನೂ ಸೆಮಿಫೈನಲ್ ಹಾದಿ ಮುಚ್ಚಿಲ್ಲ. ಆದರೆ ಸೆಮಿಫೈನಲ್ ಹಾದಿಗಾಗಿ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಫಲಿತಾಂಶಕ್ಕೆ ಕಾಯಬೇಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಸಾಧಾರಣ ಗುರಿಯನ್ನು ಆರಂಭದಲ್ಲಿ ಉತ್ತಮವಾಗಿ ಬೆನ್ನಟ್ಟಿದ ಭಾರತದ ವನಿತೆಯರು ಕೊನೆಗೆ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಎ ಬಣದ ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿದೆ.

ಉಳಿದ ಇನ್ನೊಂದು ಸ್ಥಾನಕ್ಕೆ ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪ್ರಬಲ ಪೈಪೋಟಿ ಇದೆ. ಭಾರತದ ಸೆಮಿಫೈನಲ್ ಹಾದಿ ಕಠಿಣವಾದರೂ ಭಾರತದ ಅವಕಾಶದ ಬಾಗಿಲು ಮುಚ್ಚಿಲ್ಲ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಗೆಲುವಿನೊಂದಿಗೆ ಸದ್ಯಕ್ಕೆ ಭಾರತ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ನ್ಯೂಜಿಲೆಂಡ್ ನೇರವಾಗಿ ಸೆಮೀಸ್ ಗೆ ಅರ್ಹತೆ ಪಡೆಯುತ್ತದೆ. ಆದರೆ ಅಚ್ಚರಿಯ ಫಲಿತಾಂಶದಲ್ಲಿ ಪಾಕಿಸ್ತಾನ ಗೆದ್ದರೆ, ಭಾರತದ ಸೆಮಿಫೈನಲ್ ಹಾದಿ ತೆರೆಯುತ್ತದೆ. ನಿವ್ವಳ ರನ್ ರೇಟ್ ಆಧಾರದಲ್ಲಿ ನ್ಯೂಝಿಲೆಂಡ್ ಗಿಂತ ಮುಂದಿರುವ ಭಾರತ ಸೆಮಿಫೈನಲ್ ಗೆ ಮುನ್ನಡೆಯುತ್ತದೆ.

ಆದ್ದರಿಂದ ಭಾರತದ ಭವಿಷ್ಯ ಈಗ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ನಡುವಿನ ಫಲಿತಾಂಶವನ್ನು ಆಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News