ಮಹಿಳೆಯರ ಟಿ20 ವಿಶ್ವಕಪ್ | ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

Update: 2024-10-13 18:22 GMT

Photo : x

ಶಾರ್ಜಾ : ಮಹಿಳೆಯರ ಟಿ20 ವಿಶ್ವಕಪ್ ನ 18ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಭಾರತ ತಂಡದ ವಿರುದ್ಧ 9 ರನ್ನಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ.

ಎ ಗುಂಪಿನ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಪಡೆದ ಭಾರತವು ನಾಯಕಿ ಹರ್ಮನ್ ಪ್ರೀತ್ ಕೌರ್(ಔಟಾಗದೆ 54, 47 ಎಸೆತ, 6 ಬೌಂಡರಿ)ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.

ಆಸ್ಟ್ರೇಲಿಯದ ಪರ ಸೋಫಿ ಮೊಲಿನೆಕ್ಸ್(2-32) ಹಾಗೂ ಅನಬೆಲ್ ಸದರ್ಲ್ಯಾಂಡ್(2-22) ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ದೀಪ್ತಿ ಶರ್ಮಾ(2-28) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡವನ್ನು 20 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 151 ರನ್ ಗೆ ನಿಯಂತ್ರಿಸಿತು.

ಟಾಸ್ ಜಯಿಸಿದ ಆಸ್ಟ್ರೇಲಿಯದ ಹಂಗಾಮಿ ನಾಯಕಿ ತಾಲಿಯಾ ಮೆಕ್ಗ್ರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

2.5 ಓವರ್ಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯವು ಕಳಪೆ ಆರಂಭ ಪಡೆಯಿತು. ಭಾರತದ ವೇಗದ ಬೌಲರ್ ರೇಣುಕಾ ಸಿಂಗ್(2-24) ಆಸೀಸ್ ನ ಇಬ್ಬರು ಅಗ್ರ ಸರದಿಯ ಆಟಗಾರ್ತಿಯರಾದ ಬೆತ್ ಮೂನಿ(2 ರನ್)ಹಾಗೂ ಜಾರ್ಜಿಯಾ ವೇರ್ಹ್ಯಾಮ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಆಗ ಮೂರನೇ ವಿಕೆಟ್ ಗೆ 62 ರನ್ ಸೇರಿಸಿದ ಗ್ರೇಸ್ ಹ್ಯಾರಿಸ್(40 ರನ್) ಹಾಗೂ ಮೆಕ್ಗ್ರಾತ್ (32 ರನ್) ತಂಡಕ್ಕೆ ಆಸರೆಯಾದರು. ಇದು ಆಸ್ಟ್ರೇಲಿಯದ ಇನ್ನಿಂಗ್ಸ್ ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.

ಗ್ರೇಸ್ ಹ್ಯಾರಿಸ್(40 ರನ್, 41 ಎಸೆತ, 5 ಬೌಂಡರಿ)ಆಸ್ಟ್ರೇಲಿಯದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಎಲ್ಲಿಸ್ ಪೆರ್ರಿ(32 ರನ್, 23 ಎಸೆತ) ಹಾಗೂ ಲಿಚ್ಫೀಲ್ಡ್ (15 ರನ್, 9 ಎಸೆತ) ಆರನೇ ವಿಕೆಟ್ಗೆ 33 ರನ್ ಸೇರಿಸಿ ತಂಡದ ಮೊತ್ತವನ್ನು 134ಕ್ಕೆ ತಲುಪಿಸಿದರು.

ಹಂಗಾಮಿ ನಾಯಕಿ ಮೆಗ್ರಾತ್ 32 ರನ್ ಕೊಡುಗೆ ನೀಡಿದರು.

ಭಾರತದ ಪರ ರೇಣುಕಾ ಸಿಂಗ್(2-24)ಹಾಗೂ ದೀಪ್ತಿ ಶರ್ಮಾ(2-28) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ರಾಧಾ ಯಾದವ್(1-14), ಪೂಜಾ ವಸ್ತ್ರಕರ್(1-22) ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್(1-32) ತಲಾ ಒಂದು ವಿಕೆಟ್ ಪಡೆದರು.

ಭಾರತ ತಂಡ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಿದ್ದು, ಸಜೀವನ್ ಸಾಜನಾ ಸ್ಥಾನಕ್ಕೆ ವೇಗದ ಬೌಲರ್ ಪೂಜಾಗೆ ಅವಕಾಶ ನೀಡಿತು. ಆಸ್ಟ್ರೇಲಿಯವು 2 ಬದಲಾವಣೆ ಮಾಡಿದ್ದು, ಗ್ರೇಸ್ ಹ್ಯಾರಿಸ್ ಹಾಗೂ ಡಾರ್ಸಿ ಬ್ರೌನ್ ಮತ್ತೆ ಅವಕಾಶ ಪಡೆದಿದ್ದಾರೆ. ಕಾಲು ನೋವಿನಿಂದಾಗಿ ಅಲಿಸಾ ಹೀಲಿ ಈ ಪಂದ್ಯದಿಂದ ವಂಚಿತರಾಗಿದ್ದಾರೆ.

ಭಾರತವು ಎ ಗುಂಪಿನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯ ತಂಡದ ನಂತರ 2ನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News