ಪ್ರಥಮ ಟೆಸ್ಟ್: ಮಿಂಚಿದ ವೇಗಿಗಳು, ಭಾರತಕ್ಕೆ ಭಾರೀ ಮುನ್ನಡೆ

Update: 2024-09-20 15:31 GMT

PC : PTI 

ಚೆನ್ನೈ : ಪ್ರಥಮ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ 17 ವಿಕೆಟ್‌ಗಳು ಪತನಗೊಂಡಿದ್ದು, ಬಾಂಗ್ಲಾದೇಶ ವಿರುದ್ಧ ಜಸ್‌ಪ್ರಿತ್ ಬುಮ್ರಾ ನೇತೃತ್ವದಲ್ಲಿ ಭಾರತದ ವೇಗದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.

ಶಾದ್‌ಮನ್ ಇಸ್ಲಾಮ್(2 ರನ್) ಅವರನ್ನು ಬೇಗನೆ ಔಟ್ ಮಾಡಿದ ಬುಮ್ರಾ ಆನಂತರ ಮುಶ್ಫಿಕುರ್ರಹೀಂ(8 ರನ್), ತಸ್ಕಿನ್ ಅಹ್ಮದ್(11 ರನ್) ಹಾಗೂ ಹಸನ್ ಮಹ್ಮೂದ್(9 ರನ್) ವಿಕೆಟ್‌ಗಳನ್ನು ಉರುಳಿಸಿದರು.

ಜಸ್‌ಪ್ರಿತ್ ಬುಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತವು ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗೆ ನಿಯಂತ್ರಿಸಿ 227 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಎರಡನೇ ದಿನದಾಟದಂತ್ಯಕ್ಕೆ ಭಾರತವು ಒಟ್ಟಾರೆ 308 ರನ್ ಮುನ್ನಡೆ ಸಂಪಾದಿಸಿದೆ.

ಬುಮ್ರಾ 50 ರನ್ ವೆಚ್ಚದಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದರೆ, ಮುಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜ ಅವರು ಬುಮ್ರಾಗೆ ಉತ್ತಮ ಸಾಥ್ ನೀಡಿದರು.

ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತವು ಮತ್ತೊಮ್ಮೆ ಕಳಪೆ ಆರಂಭ ಪಡೆಯಿತು. ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 81 ರನ್ ಗಳಿಸಿದೆ. ಶುಭಮನ್ ಗಿಲ್(ಔಟಾಗದೆ 33) ಹಾಗೂ ರಿಷಭ್ ಪಂತ್(ಔಟಾಗದೆ 12) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತದ ಎರಡನೇ ಇನಿಂಗ್ಸ್‌ನಲ್ಲಿ ತಸ್ಕಿನ್ ಅಹ್ಮದ್ ಅವರು ರೋಹಿತ್ ಶರ್ಮಾರನ್ನು 5 ರನ್‌ಗೆ ಔಟ್ ಮಾಡಿದರು. ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ನಹೀದ್ ರಾಣಾಗೆ ವಿಕೆಟ್ ಒಪ್ಪಿಸಿದರು.

2ನೇ ಇನಿಂಗ್ಸ್‌ನಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ಮೊದಲ ಇನಿಂಗ್ಸ್‌ನಲ್ಲಿ ಗಮನಾರ್ಹ ಮುನ್ನಡೆ ಪಡೆದಿರುವ ಭಾರತವು ಸದ್ಯ ಸುಸ್ಥಿತಿಯಲ್ಲಿದೆ. ವಿರಾಟ್ ಕೊಹ್ಲಿ(17 ರನ್)ಅವರು ಗಿಲ್ ಜೊತೆ 3ನೇ ವಿಕೆಟ್‌ಗೆ 39 ರನ್ ಸೇರಿಸಿ ಇನಿಂಗ್ಸ್ ಆಧರಿಸಿದ್ದಾರೆ.

*ಬಾಂಗ್ಲಾದೇಶ 149 ರನ್‌ಗೆ ಆಲೌಟ್: ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 376 ರನ್‌ಗೆ ನಿಯಂತ್ರಿಸಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿ ಕುಸಿತ ಕಂಡಿತು. 40 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಆಗ ಲಿಟನ್ ದಾಸ್(22 ರನ್) ಹಾಗೂ ಶಾಕಿಬ್ ಅಲ್ ಹಸನ್(32 ರನ್) ಆರನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ದಾಸ್ ಅವರು ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಸ್ವೀಪ್ ಮಾಡಲು ಹೋಗಿ ಬದಲಿ ಫೀಲ್ಡರ್ ಧ್ರುವ್ ಜುರೆಲ್‌ಗೆ ಕ್ಯಾಚ್ ನೀಡಿದರು. ಶಾಕಿಬ್ ಅವರು ಜಡೇಜರ ಎಸೆತದಲ್ಲಿ ರಿವರ್ಸ್ ಸ್ವೀಪ್‌ಗೆ ಯತ್ನಿಸಿ ವಿಕೆಟ್‌ಕೀಪರ್ ಪಂತ್‌ಗೆ ಕ್ಯಾಚ್ ನೀಡಿದರು. ಶಾಕಿಬ್ ಬಾಂಗ್ಲಾದೇಶ ಪರ ಗರಿಷ್ಠ ಸ್ಕೋರ್ ಗಳಿಸಿದರು. ಮೆಹದಿ ಹಸನ್ ಮಿರಾಝ್ ಔಟಾಗದೆ 27 ರನ್ ಗಳಿಸಿದರು. ನಾಯಕ ನಜ್ಮುಲ್ ಹುಸೈನ್(20 ರನ್)ಮುಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.

ಆಕಾಶ್ ದೀಪ್(2-19) ,ರವೀಂದ್ರ ಜಡೇಜ(2-19)ಹಾಗೂ ಮುಹಮ್ಮದ್ ಸಿರಾಜ್(2-30) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಬಾಂಗ್ಲಾದೇಶದ ಬ್ಯಾಟಿಂಗ್ ಸರದಿಗೆ ಸವಾಲಾದರು.

ವೇಗದ ಬೌಲರ್ ಆಕಾಶ್‌ದೀಪ್ ಅವರು ಆರಂಭಿಕ ಬ್ಯಾಟರ್ ಝಾಕಿರ್ ಹಸನ್ (3 ರನ್) ಹಾಗೂ ಮೂಮಿನುಲ್ ಹಕ್(0) ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಬಾಂಗ್ಲಾದೇಶದ ಕುಸಿತಕ್ಕೆ ನಾಂದಿ ಹಾಡಿದರು.

*ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್: ಇದಕ್ಕೂ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 339 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡವು 37 ರನ್ ಸೇರಿಸುವಷ್ಟರಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಶತಕವೀರ ಅಶ್ವಿನ್(113 ರನ್)ಹಾಗೂ ಜಡೇಜ(86 ರನ್)ನಡುವಿನ 199 ರನ್ ಜೊತೆಯಾಟಕ್ಕೆ ತಸ್ಕಿನ್ ಅಹ್ಮದ್ ತೆರೆ ಎಳೆದರು. ಅಶ್ವಿನ್-ಜಡೇಜ ಜೋಡಿ 240 ಎಸೆತಗಳನ್ನು ಎದುರಿಸಿ ಮೂರು ಸೆಶನ್‌ಗಳಲ್ಲಿ 189 ನಿಮಿಷಗಳ ಕಾಲ ಆಡಿದರು. ತಸ್ಕಿನ್ ಅಹ್ಮದ್(3-55)ಅವರು ಅಶ್ವಿನ್, ಜಡೆಜ ಹಾಗೂ ಆಕಾಶ್‌ದೀಪ್ ಸಹಿತ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News