ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತ 421/7
First Test: England v India 421/7
ಹೈದರಾಬಾದ್: ಕೆ.ಎಲ್. ರಾಹುಲ್ ಅಮೋಘ ಪ್ರದರ್ಶನ ಹಾಗೂ ರವೀಂದ್ರ ಜಡೇಜರ ಸಾಂದರ್ಭಿಕ ಅರ್ಧಶತಕದ ಕೊಡುಗೆಯ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಎರಡನೇ ದಿನದಾಟದಂತ್ಯಕ್ಕೆ ಭಾರತ 7 ವಿಕೆಟ್ ಗಳ ನಷ್ಟಕ್ಕೆ 421 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಶುಕ್ರವಾರ ದಿನದಾಟದಂತ್ಯಕ್ಕೆ ಜಡೇಜ ಔಟಾಗದೆ 81 ಹಾಗೂ ಅಕ್ಷರ್ ಪಟೇಲ್ ಔಟಾಗದೆ 35 ರನ್ ಗಳಿಸಿದ್ದು, 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 63 ರನ್ ಸೇರಿಸಿ ಭಾರತದ ಇನಿಂಗ್ಸ್ ಗೆ ಬಲ ನೀಡಿದ್ದಾರೆ.
ಸದ್ಯ 175 ರನ್ ಮುನ್ ನಡೆಯಲ್ಲಿರುವ ಭಾರತವು ಸುಭದ್ರವಾಗಿದ್ದು, ಇಂಗ್ಲೆಂಡ್ ಗೆ ಇನ್ನಷ್ಟು ಸವಾಲಾಗುವತ್ತ ಹೆಜ್ಜೆ ಇಟ್ಟಿದೆ.
ಭಾರತವು 1 ವಿಕೆಟ್ ನಷ್ಟಕ್ಕೆ 119 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಔಟಾಗದೆ 76 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 80 ರನ್(74 ಎಸೆತ)ಗಳಿಸಿ ಜೋ ರೂಟ್ ಗೆ ರಿಟರ್ನ್ ಕ್ಯಾಚ್ ನೀಡಿದರು.
14 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಶುಭಮನ್ ಗಿಲ್(23ರನ್)ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆಗ ಜೊತೆಯಾದ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್(35 ರನ್)4ನೇ ವಿಕೆಟ್ ಗೆ 64 ರನ್ ಜೊತೆಯಾಟ ನಡೆಸಿದರು. ಅಯ್ಯರ್ ವಿಕೆಟನ್ನು ಪಡೆದ ರೆಹಾನ್ ಅಹ್ಮದ್ ಈ ಜೋಡಿಯನ್ನು ಬೇರ್ಪಡಿಸಿದರು.
50ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಹುಲ್ ಆಲ್ರೌಂಡರ್ ಜಡೇಜರೊಂದಿಗೆ 5ನೇ ವಿಕೆಟ್ ಗೆ ಅರ್ಧಶತಕದ(65 ರನ್)ಜೊತೆಯಾಟ ನಡೆಸಿದರು. 86 ರನ್(123 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿ ಹಾರ್ಟ್ಲಿಗೆ ವಿಕೆಟ್ ಒಪ್ಪಿಸಿದ ಕರ್ನಾಟಕದ ಬ್ಯಾಟರ್ ರಾಹುಲ್ 9ನೇ ಶತಕದಿಂದ ವಂಚಿತರಾದರು.
49 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಜಡೇಜ 84 ಎಸೆತಗಳಲ್ಲಿ 20ನೇ ಅರ್ಧಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಎಸ್.ಭರತ್ (41 ರನ್, 81 ಎಸೆತ)ಅವರೊಂದಿಗೆ ಜಡೇಜ 6ನೇ ವಿಕೆಟ್ ಜೊತೆಯಾಟದಲ್ಲಿ 141 ಎಸೆತಗಳಲ್ಲಿ 68 ರನ್ ಸೇರಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಇತ್ತೀಚೆಗೆ ಭಾರತ ಎ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಶತಕ ಗಳಿಸಿದ್ದ ಭರತ್ ಇಂದು 41 ರನ್ ಗೆ ವಿಕೆಟ್ ಒಪ್ಪಿಸಿ ಚೊಚ್ಚಲ ಅರ್ಧಶತಕ ಗಳಿಸುವುದರಿಂದ ವಂಚಿತರಾದರು.
ಔಟಾಗದೆ 81 ರನ್(155 ಎಸೆತ, 7 ಬೌಂಡರಿ, 2 ಸಿಕ್ಸರ್)ಗಳಿಸಿರುವ ಜಡೇಜ 4ನೇ ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ಜಡೇಜಗೆ ಅಕ್ಷರ್ ಪಟೇಲ್(35 ರನ್, 62 ಎಸೆತ, 5 ಬೌಂಡರಿ, 1 ಸಿ.)ಸಾಥ್ ನೀಡುತ್ತಿದ್ದಾರೆ.