ನಾಳೆಯಿಂದ ಮೊದಲ ಟೆಸ್ಟ್ ಆರಂಭ | ಭಾರತದ ಬ್ಯಾಟಿಂಗ್‌ಗೆ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಸವಾಲು

Update: 2024-09-18 15:28 GMT

PC : PTI

ಚೆನ್ನೈ: ಆತಿಥೇಯ ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಗುರುವಾರದಿಂದ ಆರಂಭವಾಗಲಿದ್ದು, ಭಾರತದ ಕ್ರಿಕೆಟ್ ತಂಡ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಎದುರು ತನ್ನ ಬ್ಯಾಟಿಂಗ್‌ನ್ನು ಸುಧಾರಿಸುವತ್ತ ಗಮನ ಹರಿಸಲಿದೆ.

ಪಾಕಿಸ್ತಾನ ವಿರುದ್ಧ್ದ ಇತ್ತೀಚೆಗಷ್ಟೇ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಬಾಂಗ್ಲಾದೇಶವನ್ನು ಭಾರತ ಈ ಬಾರಿ ಹಗುರವಾಗಿ ಪರಿಗಣಿಸುವಂತಿಲ್ಲ.

ಕಳೆದ ಒಂದು ದಶಕದಿಂದ ಸ್ವದೇಶದಲ್ಲಿ 44 ಪಂದ್ಯಗಳಲ್ಲಿ 40ರಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿರುವ ಹೊರತಾಗಿಯೂ ಭಾರತವು ಇತ್ತೀಚೆಗಿನ ದಿನಗಳಲ್ಲಿ ಸ್ಪಿನ್ ದಾಳಿ ಎದುರು ದುರ್ಬಲವಾಗಿ ಕಂಡು ಬರುತ್ತಿದೆ.

ಬಾಂಗ್ಲಾದೇಶ ತಂಡ ಭಾರತದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪ್ರತಿ ಸಲವೂ ಭಾರೀ ಅಂತರದಿಂದ ಸೋತಿದೆ. ಬಾಂಗ್ಲಾದೇಶ ಈ ತನಕ 13 ಬಾರಿ ಭಾರತವನ್ನು ಎದುರಿಸಿದ್ದರೂ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಭಾರತವು ಸ್ವದೇಶದಲ್ಲಿ ಈ ತನಕ ಕೇವಲ 4 ಟೆಸ್ಟ್ ಪಂದ್ಯವನ್ನು ಸೋತಿದೆ.

2022ರಲ್ಲಿ ಬಾಂಗ್ಲಾದೇಶ ತಂಡ ನ್ಯೂಝಿಲ್ಯಾಂಡ್ ತಂಡವನ್ನು ಮೊದಲ ಬಾರಿ ಮಣಿಸಿತ್ತು. ಕಳೆದ ತಿಂಗಳಷ್ಟೇ ಪಾಕಿಸ್ತಾನವನ್ನು ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ಸೋಲಿಸಿತ್ತು. ಸತತ 2ನೇ ಪಂದ್ಯವನ್ನು ಜಯಿಸಿ ಮೂರು ವರ್ಷಗಳ ನಂತರ ವಿದೇಶದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಜಯಿಸಿದೆ. ಬಾಂಗ್ಲಾದೇಶ ವಿದೇಶದಲ್ಲಿ ಆಡಿರುವ 67 ಪಂದ್ಯಗಳಲ್ಲಿ ಕೇವಲ 8 ಗೆಲುವು ದಾಖಲಿಸಿದೆ. 2021ರ ನಂತರ 4 ಗೆಲುವು ದಾಖಲಿಸಿದೆ.

ಈ ಸರಣಿ ಆಡುವ ಮೂಲಕ ಭಾರತವು ಮುಂಬರುವ ಬಿಡುವಿಲ್ಲದ ಟೆಸ್ಟ್ ಪಂದ್ಯಗಳಿಗೆ ಚಾಲನೆ ನೀಡಲಿದೆ. ಮುಂದಿನ ದಿನಗಳಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದೆ.

ಬಾಂಗ್ಲಾದೇಶವು ಪಾಕಿಸ್ತಾನ ವಿರುದ್ಧ ಸರಣಿಯನ್ನು 2-0 ಅಂತರದಿಂದ ಗೆದ್ದ ವಿಶ್ವಾಸದಲ್ಲಿದೆ. ಎದುರಾಳಿ ಭಾರತಕ್ಕೆ ಸವಾಲಾಗುವ ಸಾಧ್ಯತೆಯಿದೆ.

ಭಾರತದ ಪ್ರಮುಖ ಆಟಗಾರರು ಇತ್ತೀಚೆಗೆ ಸ್ಪಿನ್ ಬೌಲಿಂಗ್ ಎದುರು ಪರದಾಟ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ 2021ರ ನಂತರ 15 ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ ಎದುರು 30ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಸ್ಪಿನ್ನರ್ ಎದುರು ರೋಹಿತ್ ಶರ್ಮಾರ ಸರಾಸರಿಯು ಕಳೆದ 3 ವರ್ಷಗಳಲ್ಲಿ 44ಕ್ಕೆ ಕುಸಿದಿದೆ. ಕೆ.ಎಲ್.ರಾಹುಲ್ ಕೂಡ ಪರದಾಟ ನಡೆಸಿದ್ದು, ಸ್ವದೇಶದಲ್ಲಿ ನಡೆದಿದ್ದ ಹಿಂದಿನ 5 ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ ಎದುರು 23.40ರ ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದಾರೆ.

ಇತ್ತೀಚೆಗೆ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳ ಎದುರು ಪರದಾಟ ನಡೆಸಿರುವ ಭಾರತವು ಈ ವಿಭಾಗದತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ಸಹಾಯಕ ಕೋಚ್ ರಿಯಾನ್ ಟೆನ್ ಡೊಶ್ಚೆಟ್ ಒತ್ತಿ ಹೇಳಿದ್ದಾರೆ.

ಶಾಕಿಬ್ ಅಲ್ ಹಸನ್, ತೈಜುಲ್ ಇಸ್ಲಾಮ್ ಹಾಗೂ ಮೆಹಿದಿ ಹಸನ್ ಮಿರಾಝ್‌ರನ್ನು ಒಳಗೊಂಡಿರುವ ಬಾಂಗ್ಲಾದೇಶದ ಸ್ಪಿನ್ ದಾಳಿಯನ್ನು ಎದುರಿಸುವುದು ಭಾರತಕ್ಕೆ ಸವಾಲಾಗಿದೆ. ರಿಷಭ್ ಪಂತ್ ಹಿಂದಿನ 5 ಪಂದ್ಯಗಳಲ್ಲಿ ಸ್ಪಿನ್ ವಿರುದ್ದ 70ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಶುಭಮನ್ ಗಿಲ್(10 ಪಂದ್ಯಗಳು, 56ರ ಸರಾಸರಿ) ಹಾಗೂ ಯಶಸ್ವಿ ಜೈಸ್ವಾಲ್(ಐದು ಪಂದ್ಯಗಳು, 115 ಸರಾಸರಿ) ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಭರವಸೆ ಮೂಡಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಅನುಭವಿ ಸ್ಪಿನ್ನರ್‌ಗಳು ಇರಲಿಲ್ಲ.

ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜರನ್ನು ಒಳಗೊಂಡಿರುವ ಭಾರತದ ಬೌಲಿಂಗ್ ಸರದಿಯು ಬಲಿಷ್ಠವಾಗಿದೆ. ಮೂರನೇ ವೇಗದ ಬೌಲರ್ ಆಕಾಶ್‌ದೀಪ್ ಇಲ್ಲವೇ ಯಶ್ ದಯಾಳ್‌ರನ್ನು ಸೇರಿಸಿಕೊಳ್ಳಬೇಕೊ, ಅಥವಾ ಮೂರನೇ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಅಥವಾ ಅಕ್ಷರ್ ಪಟೇಲ್‌ರನ್ನು ಉಳಿಸಿಕೊಳ್ಳಬೇಕೊ ಎಂಬ ಕುರಿತು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಲಿದೆ.

ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಸಕಾರಾತ್ಮಕವಾಗಿ ತನ್ನ ಅವಧಿಯನ್ನು ಆರಂಭಿಸುವ ಗುರಿ ಇಟ್ಟುಕೊಂಡಿದ್ದಾರೆ. ಶ್ರೀಲಂಕಾದಲ್ಲಿ ಸೀಮಿತ ಓವರ್ ಪಂದ್ಯದಲ್ಲಿ ಮಿಶ್ರ ಫಲಿತಾಂಶ ಪಡೆದಿರುವ ಗಂಭೀರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ಈ ಸರಣಿಯು ಭಾರತದ ಬ್ಯಾಟಿಂಗ್ ಸರದಿಗೆ ಸತ್ವಪರೀಕ್ಷೆಯಾಗಿದೆ. ಈ ಮೂಲಕ ಭಾರತವು ಮುಂಬರುವ ದೀರ್ಘ ಟೆಸ್ಟ್ ಋತುವಿಗೆ ಚಾಲನೆ ನೀಡಲಿದೆ.

ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್(ವಿಕೆಟ್‌ಕೀಪರ್), ಧ್ರುವ್ ಜುರೆಲ್(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್,ಆಕಾಶ್ ದೀಪ್ , ಜಸ್‌ಪ್ರಿತ್ ಬುಮ್ರಾ, ಯಶ್ ದಯಾಳ್.

ಬಾಂಗ್ಲಾದೇಶ: ನಜ್ಮುಲ್ ಹುಸೈನ್ ಶಾಂಟೊ(ನಾಯಕ), ಮಹ್ಮುದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮನ್ ಇಸ್ಲಾಮ್,ಮೊಮಿನುಲ್ ಹಕ್, ಮುಶ್ಫಿಕುರ‌್ರಹೀಂ(ವಿಕೆಟ್‌ಕೀಪರ್), ಶಾಕಿಬ್ ಅಲ್ ಹಸನ್, ಲಿಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಮ್, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹ್ಮೂದ್, ತಸ್ಕಿನ್ ಅಹ್ಮದ್, ಸಯ್ಯದ್ ಖಲಿದ್ ಅಹ್ಮದ್, ಜಾಕರ್ ಅಲಿ ಅನಿಕ್.

ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30 ಮೊದಲ ಟೆಸ್ಟ್ ಆರಂಭ

ಅಂಕಿ-ಅಂಶ

► ಭಾರತವು ಸ್ವದೇಶದಲ್ಲಿ ಸತತ 17 ಸರಣಿಗಳನ್ನು ಜಯಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. 2012ರ ನವೆಂಬರ್‌ನಲ್ಲಿ ಭಾರತದ ಗೆಲುವಿನ ಓಟ ಆರಂಭವಾಗಿದೆ.

► ಜಸ್‌ಪ್ರಿತ್ ಬುಮ್ರಾ 2024ರಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಬುಮ್ರಾ 5 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.

► ಕೇವಲ 9 ಟೆಸ್ಟ್ ಪಂದ್ಯಗಳಲ್ಲಿ 1,028 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಅವರು ಹಾಲಿ ಡಬ್ಲ್ಯುಟಿಸಿ ಸರಣಿಯಲ್ಲಿ ಅಗ್ರ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕಮಿಂದು ಮೆಂಡಿಸ್ ಮೊದಲ ಸ್ಥಾನದಲ್ಲಿದ್ದಾರೆ.

► ರಿಷಭ್ ಪಂತ್ ಭಾರತದಲ್ಲಿ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳ ವಿರುದ್ಧ 77.16ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಪಿಚ್ ಹಾಗೂ ವಾತಾವರಣ

ಆರಂಭಿಕ ಟೆಸ್ಟ್ ಪಂದ್ಯ ನಡೆಯಲಿರುವ ಚೆನ್ನೈ ಪಿಚ್ ಕೆಂಪು ಮಣ್ಣಿನಿಂದ ಕೂಡಿದ್ದು ಗಮನಾರ್ಹ ಬೌನ್ಸ್ ಇರಲಿದ್ದು, ವೇಗಿಗಳು ಹಾಗೂ ಸ್ಪಿನ್ನರ್‌ಗಳಿಗೆ ಸಮಾನವಾಗಿ ನೆರವಾಗಬಹುದು. ಚೆನ್ನೈನ ತೀವ್ರ ಶಾಖಕ್ಕೆ ಪಿಚ್‌ನಲ್ಲಿ ಬಿರುಕು ಮೂಡಬಹುದು. ಇದರರ್ಥ ಪಂದ್ಯ ಮುಂದುವರಿದಂತೆ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಈ ಕ್ಷಣದಲ್ಲಿ ಚೆನ್ನೈನಲ್ಲಿ ತೀವ್ರ ಶಾಖದ ಎಚ್ಚರಿಕೆ ನೀಡಲಾಗಿದೆ.

ಟೀಮ್ ನ್ಯೂಸ್

ಭಾರತವು ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಹೆಚ್ಚಾಗಿ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳನ್ನು ಆಡಿಸುತ್ತದೆ. ಆದರೆ, ಬಾಂಗ್ಲಾದೇಶ ವಿರುದ್ದ ಮೂವರು ವೇಗಿಗಳನ್ನು ಕಣಕ್ಕಿಳಿಸಬಹುದು. 2019-20ರ ಸರಣಿಯಲ್ಲಿ ಈ ಪ್ರಯೋಗ ನಡೆಸಿತ್ತು. ಒಂದು ವೇಳೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದರೆ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದು,ಆರ್.ಅಶ್ವಿನ್, ರವೀಂದ್ರ ಜಡೇಜ ಹಾಗೂ ಕುಲದೀಪ್ ಯಾದವ್ ಮೂವರು ಸ್ಪಿನ್ನರ್‌ಗಳಾಗಿದ್ದಾರೆ.

ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ದ ಸರಣಿಯ ವೇಳೆ ಗಾಯಗೊಂಡ ನಂತರ ಇದೇ ಮೊದಲ ಬಾರಿ ಕೆ.ಎಲ್.ರಾಹುಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಮ ಸರದಿಯಲ್ಲಿ ಸರ್ಫರಾಝ್ ಖಾನ್ ಬದಲಿಗೆ ಆಡಲಿದ್ದಾರೆ. ಧ್ರುವ್ ಜುರೆಲ್ ಬದಲಿಗೆ ಪಂತ್ ವಿಕೆಟ್‌ಕೀಪಿಂಗ್ ನಿಭಾಯಿಸಲಿದ್ದಾರೆ. ಜುರೆಲ್ ಇಂಗ್ಲೆಂಡ್ ವಿರುದ್ಧ ಕೊನೆಯ 3 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು.

ಬಾಂಗ್ಲಾದೇಶವು ಕಳೆದ ತಿಂಗಳು ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್ ಪಂದ್ಯ ಗೆದ್ದಿರುವ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಮೂವರು ಸ್ಪಿನ್ನರ್‌ಗಳನ್ನು ಆಡಿಸಲು ಎದುರು ನೋಡುತ್ತಿದೆ. ರಾವಲ್ಪಿಂಡಿಯಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶವು ಹಸನ್ ಮಹ್ಮೂದ್, ತಸ್ಕಿನ್ ಅಹ್ಮದ್ ಹಾಗೂ ನಶಿದ್ ರಾಣಾರನ್ನು ಕಣಕ್ಕಿಳಿಸಿತ್ತು. ಈ ಮೂವರು ವೇಗಿಗಳು 20ರಲ್ಲಿ 14 ವಿಕೆಟ್‌ಗಳನ್ನು ಉರುಳಿಸಿದ್ದರು. ಇದರಲ್ಲಿ 2ನೇ ಇನಿಂಗ್ಸ್‌ನ 10 ವಿಕೆಟ್‌ಗಳೂ ಸೇರಿವೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ಪರ ಪಂದ್ಯ ಆಡಿದ ನಂತರ ಮಂಗಳವಾರ ರಾತ್ರಿ ಶಾಕಿಬ್ ಚೆನ್ನೈಗೆ ಆಗಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News