ಭಾರತ ವಿರುದ್ಧ ಮೊದಲ ಟೆಸ್ಟ್: ಪೋಪ್ ಆಕರ್ಷಕ ಶತಕ
ಹೈದರಾಬಾದ್: ಅಗ್ರ ಸರದಿಯ ಬ್ಯಾಟರ್ ಒಲಿ ಪೋಪ್ ಅಜೇಯ ಶತಕದ(148 ರನ್)ಬಲದಿಂದ ಬ್ಯಾಟಿಂಗ್ ಕುಸಿತದಿಂದ ಪಾರಾದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತನ್ನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 316 ರನ್ ಗಳಿಸಿದೆ.
ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತ 246 ರನ್‌ಗೆ ಉತ್ತರವಾಗಿ ಭಾರತವು ತನ್ನ ಮೊದಲ ಇನಿಂಗ್ಸ್‌ನಲ್ಲಿ 436 ರನ್ ಗಳಿಸಿ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 190 ರನ್ ಮುನ್ನಡೆ ಪಡೆಯಿತು.
ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡ 126 ರನ್ ಮುನ್ನಡೆಯಲ್ಲಿದೆ. ಭಾರತಕ್ಕೆ ಗೆಲ್ಲಲು ಕಠಿಣ ಸವಾಲು ನೀಡುವ ವಿಶ್ವಾಸದಲ್ಲಿದೆ.
ಇಂಗ್ಲೆಂಡ್ 163 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆರನೇ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ ಪೋಪ್(ಔಟಾಗದೆ 148 ರನ್, 208 ಎಸೆತ, 17 ಬೌಂಡರಿ)ಹಾಗೂ ಬೆನ್ ಫೋಕ್ಸ್(34 ರನ್, 81 ಎಸೆತ, 2 ಬೌಂಡರಿ)ತಂಡವನ್ನು ಆಧರಿಸಿದರು. ದಿನದಾಟದಂತ್ಯಕ್ಕೆ ಪೋಪ್ ಹಾಗೂ ರೆಹಾನ್ ಅಹ್ಮದ್(ಔಟಾಗದೆ 16)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಔಟಾಗದೆ 148 ರನ್ ಗಳಸಿರುವ ಪೋಪ್ ಭಾರತ ವಿರುದ್ಧ ಭಾರತದ ನೆಲದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಪ್ರವಾಸಿ ತಂಡದ ಬ್ಯಾಟರ್ ಎನಿಸಿಕೊಂಡರು. 2012ರಲ್ಲಿ ಅಹ್ಮದಾಬಾದ್‌ನಲ್ಲಿ ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಈ ಸಾಧನೆ ಮಾಡಿದ್ದರು.
ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನೀಡಿದ ಪೋಪ್ 154 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ವೃತ್ತಿ ಬದುಕಿನಲ್ಲಿ 5ನೇ ಶತಕ ಪೂರೈಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಇನಿಂಗ್ಸ್‌ನಲ್ಲಿ ಇದೇ ಮೊದಲ ಬಾರಿ ಶತಕ ಗಳಿಸಿದರು. ಭಾರತ ವಿರುದ್ಧ ಮೊದಲ ಶತಕ ದಾಖಲಿಸಿದ ಪೋಪ್ ಹೆಲ್ಮೆಟ್ ತೆಗೆದು ಸಂಭ್ರಮಿಸಿದರು.
110 ರನ್ ಗಳಿಸಿದಾಗ ಜಡೇಜ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್‌ರಿಂದ ಜೀವದಾನ ಪಡೆದಿದ್ದ ಪೋಪ್ ಭಾರತದ ಸ್ಪಿನ್ ಬೌಲರ್‌ಗಳ ಎದುರು ದಿಟ್ಟ ಪ್ರದರ್ಶನ ನೀಡಿದರು. ಫೋಕ್ಸ್ ವಿಕೆಟ್ ಕಬಳಿಸಿದ ಅಕ್ಷರ್ ಶತಕದ ಜೊತೆಯಾಟವನ್ನು ಮುರಿದರೂ ಪೋಪ್ ತನ್ನ ಪ್ರಾಬಲ್ಯ ಮುಂದುವರಿಸಿದ್ದು ತನ್ನ ಇನಿಂಗ್ಸ್‌ನಲ್ಲಿ 17 ಬೌಂಡರಿ ಗಳಿಸಿದರು.
ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(2-29) ಹಾಗೂ ಸ್ಪಿನ್ನರ್ ಆರ್. ಅಶ್ವಿನ್(2-93) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಆದರೆ ಪೋಪ್ ಅವರ ಮಾಸ್ಟರ್ ಕ್ಲಾಸ್ ದಿನದ ಹೈಲೈಟ್ ಆಗಿ ಉಳಿಯಿತು.
ಇಂಗ್ಲೆಂಡ್ 2ನೇ ಇನಿಂಗ್ಸ್‌ನಲ್ಲಿ ಕಳಪೆ ಆರಂಭ ಪಡೆಯಿತು. ಮೊದಲ ವಿಕೆಟ್‌ನಲ್ಲಿ 45 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಝಾಕ್ ಕ್ರಾವ್ಲೆ (31ರನ್)ವಿಕೆಟ್ ಪತನವಾಯಿತು. ಬೆನ್ ಡಕೆಟ್(47 ರನ್) ಹಾಗೂ ಜೋ ರೂಟ್(2 ರನ್) ಬೆನ್ನುಬೆನ್ನಿಗೆ ಔಟಾದರು. ಜಾನಿ ಬೈರ್‌ಸ್ಟೋವ್ ಕೇವಲ 10 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು. ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಬಾರಿ ನಾಯಕ ಬೆನ್ ಸ್ಟೋಕ್ಸ್ (6 ರನ್) ವಿಕೆಟನ್ನು ಉರುಳಿಸಿ ಗಮನ ಸೆಳೆದರು.
ಭಾರತ 436 ರನ್‌ಗೆ ಆಲೌಟ್
ಇದಕ್ಕೂ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 421 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 121 ಓವರ್‌ಗಳಲ್ಲಿ 436 ರನ್ ಗಳಿಸಿ ಆಲೌಟಾಯಿತು.
ರವೀಂದ್ರ ಜಡೇಜ(87 ರನ್, 180 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್(44 ರನ್, 100 ಎಸೆತ, 7 ಬೌಂಡರಿ, 1 ಸಿಕ್ಸರ್)ಎಂಟನೇ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿ ಪ್ರವಾಸಿ ತಂಡ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ದೊಡ್ಡ ಮುನ್ನಡೆ ಒದಗಿಸಿಕೊಟ್ಟರು. ಜಡೇಜರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಪಾರ್ಟ್‌ಟೈಮ್ ಬೌಲರ್ ಜೋ ರೂಟ್ ಈ ಜೋಡಿಯನ್ನು ಬೇರ್ಪಡಿಸಿದರು.
ಜಡೇಜ ವಿಕೆಟ್ ಪತನದ ಬೆನ್ನಿಗೇ ಬುಮ್ರಾ(0) ಹಾಗೂ ಅಕ್ಷರ್‌ಪಟೇಲ್ ವಿಕೆಟ್ ಒಪ್ಪಿಸಿದರು. ಜಡೇಜ ಹಾಗೂ ಬುಮ್ರಾರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದ ರೂಟ್ ಸ್ವಲ್ಪದರಲ್ಲೇ ಹ್ಯಾಟ್ರಿಕ್ ವಿಕೆಟ್‌ನಿಂದ ವಂಚಿತರಾದರು. ಮುಹಮ್ಮದ್ ಸಿರಾಜ್ ಹ್ಯಾಟ್ರಿಕ್ ನಿರಾಕರಿಸಿದರು. ಅಕ್ಷರ್ ಪಟೇಲ್(44ರನ್) ವಿಕೆಟನ್ನು ಕಬಳಿಸಿದ ರೆಹಾನ್ ಅಹ್ಮದ್ ಭಾರತದ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.
ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಜೋ ರೂಟ್ (4-79)ಯಶಸ್ವಿ ಪ್ರದರ್ಶನ ನೀಡಿದರು. ರೆಹಾನ್ ಅಹ್ಮದ್(2-105) ಹಾಗೂ ಟಾಮ್ ಹಾರ್ಟ್ಲಿ(2-131) ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.